ದೇಶ

ವಲಸೆ ಕಾರ್ಮಿಕರಿಗೆ ಗಡಿಯಲ್ಲಿ ಪ್ರವೇಶ ನಿರ್ಬಂಧ: ಪುದುಚೆರಿ ಆರೋಗ್ಯ ಸಚಿವರಿಂದ ವಿಧಾನಸಭೆ ಪಡಸಾಲೆಯಲ್ಲಿ ಧರಣಿ

Sumana Upadhyaya

ಪುದುಚೆರಿ: 13 ಮಂದಿ ವಲಸೆ ಕಾರ್ಮಿಕರಿಗೆ ತಮ್ಮ ಜಿಲ್ಲೆಯೊಳಗೆ ಹೋಗಲು ಅವಕಾಶ ನಿರಾಕರಿಸಿದ ಜಿಲ್ಲಾಡಳಿತ ವಿರುದ್ಧ ಪುದುಚೆರಿ ಸರ್ಕಾರದ ಆರೋಗ್ಯ ಸಚಿವ ವಿಧಾನಸಭೆಯ ಹೊರಗೆ ಧರಣಿ ನಡೆಸುತ್ತಿದ್ದಾರೆ.

ಕಪ್ಪು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಪುದುಚೆರಿ ಸರ್ಕಾರದ ಆರೋಗ್ಯ ಸಚಿವ ಮಲ್ಲಡಿ ಕೃಷ್ಣ ರಾವ್ ವಿಧಾನಸೌಧದ ಪಡಸಾಲೆಯಲ್ಲಿ ಇಂದು ಧರಣಿ ಆರಂಭಿಸಿದ್ದಾರೆ. ಆಂಧ್ರ ಪ್ರದೇಶ-ಯಾನಮ್ ಗಡಿಭಾಗದಲ್ಲಿ ಮಹಿಳೆ ಸೇರಿ 13 ಮಂದಿ ಯಾನಮ್ ವಲಸಿಗ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದು ಅವರಿಗೆ ಅವರ ಊರಿಗೆ ಹೋಗಲು ಪ್ರವೇಶ ನಿರಾಕರಿಸಿರುವುದನ್ನು ಪ್ರತಿಭಟಿಸಿ ಧರಣಿ ನಿರತರಾಗಿದ್ದಾರೆ.

ಹೈದರಾಬಾದ್, ಪುಟಪರ್ತಿ, ಒಡಿಶಾಗಳಲ್ಲಿ ಕೆಲಸ ಮಾಡುತ್ತಿದ್ದ ಪುದುಚೆರಿಯ ಯಾನಮ್ ನ 13 ನಿವಾಸಿಗಳು ಲಾಕ್ ಡೌನ್ ಘೋಷಣೆಯಾದ ನಂತರ ನೂರಾರು ಕಿಲೋಮೀಟರ್ ನಡೆದುಕೊಂಡು ಹೋಗಿ ಯಾನಮ್ ಗಡಿಭಾಗ ತಲುಪಿದ್ದರು. ಆದರೆ ಲಾಕ್ ಡೌನ್ ನೆಪವೊಡ್ಡಿ ಕಾರ್ಮಿಕರಿಗೆ ಅವರ ಊರಿಗೆ ಹೋಗಲು ಅಧಿಕಾರಿಗಳು ನಿರಾಕರಿಸಿದರು. ಮಾನವೀಯ ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಗೆ ಒಳಪಡಿಸಿ ಎಂದು ಸಚಿವ ಕೃಷ್ಣ ರಾವ್ ಹೇಳಿದರೂ ಅಧಿಕಾರಿಗಳು ಗಮನಹರಿಸಿಲ್ಲ.

ಈ ಹಿನ್ನೆಲೆಯಲ್ಲಿ ಯಾನಮ್ ಗೆ ಕಾರ್ಮಿಕರನ್ನು ಬಿಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಿನ್ನೆ ಕೃಷ್ಣ ರಾವ್ ಬೆದರಿಕೆಯೊಡ್ಡಿದ್ದರು. ಇಂದು ಸ್ಪೀಕರ್ ವಿ ಪಿ ಶಿವಕೊಲುಂಥು ಅವರನ್ನು ಭೇಟಿ ಮಾಡಿದ ಕೃಷ್ಣ ರಾವ್ ತಮ್ಮ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ಎಲ್ಲಾ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ವಿಜ್ಞಾಪನೆ ಸಲ್ಲಿಸಿದ್ದರು. ನಂತರ ವಿಧಾನಸೌಧ ಪಡಸಾಲೆಗೆ ಬಂದು ಧರಣಿ ಆರಂಭಿಸಿದರು.

SCROLL FOR NEXT