ದೇಶ

ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟ

Sumana Upadhyaya

ನವದೆಹಲಿ: ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗೃಹ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಕಳೆದ ಮೇ 24ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಗೆ ಕೆಲವು ಬದಲಾವಣೆಗಳನ್ನು ಮಾಡಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದ್ದು ಅದು ಆಗಸ್ಟ್ 8ರಿಂದ ಜಾರಿಗೆ ಬರಲಿದೆ.

ಪರಿಷ್ಕೃತ ಮಾರ್ಗಸೂಚಿಯಲ್ಲಿ ಬಹಳ ಮುಖ್ಯವಾದ ಬದಲಾವಣೆ ಪ್ರಯಾಣಿಕರು ಭಾರತಕ್ಕೆ ಬಂದಿಳಿದ ನಂತರ  ಕೊರೋನಾ ನೆಗೆಟಿವ್ ವರದಿ ತೋರಿಸಿದರೆ ಪ್ರಯಾಣಿಕರು ಸಾಂಸ್ಥಿಕ ಕ್ವಾರಂಟೈನ್ ನಿಂದ ತಪ್ಪಿಸಿಕೊಳ್ಳಬಹುದು. ಪ್ರಯಾಣಕ್ಕೆ 96 ಗಂಟೆ ಮೊದಲು ಕೋವಿಡ್ ತಪಾಸಣೆ ಮಾಡಿಸಿ ಅದರಲ್ಲಿ ನೆಗೆಟಿವ್ ಎಂದು ಬಂದಿರಬೇಕು.

ಆಗಸ್ಟ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಹಿಂದೆ ಸಾಗರೋತ್ತರ ವಿಮಾನ ಹಾರಾಟಗಳನ್ನು ಜುಲೈ 31ರವರೆಗೆ ಮಾತ್ರ ನಿರ್ಬಂಧಿಸಲಾಗಿತ್ತು. ಈ ನಿರ್ಬಂಧ ಅಂತಾರಾಷ್ಟ್ರೀಯ ಕಾರ್ಗೊ ಕಾರ್ಯಾಚರಣೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅನುಮೋದನೆ ನೀಡಿರುವ ವಿಶೇಷ ವಿಮಾನಗಳಿಗೆ ಅನ್ವಯವಾಗುವುದಿಲ್ಲ.

ಹೊಸ ಮಾರ್ಗಸೂಚಿಯಲ್ಲಿ ಏನಿದೆ:

1.ಪ್ರಯಾಣಕ್ಕೆ 72 ಗಂಟೆ ಮುನ್ನ newdelhiairport.in ವೆಬ್ ಸೈಟ್ ನಲ್ಲಿ ಪ್ರಯಾಣಿಕರು ಸ್ವಘೋಷಿತ ಅರ್ಜಿಯನ್ನು ತುಂಬಬೇಕು.
2. ವೆಬ್ ಸೈಟ್ ನಲ್ಲಿ ತಾವು ಪ್ರಯಾಣ ಮಾಡಿದ ನಂತರ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುತ್ತೇವೆ ಎಂದು ಬರೆದುಕೊಡಬೇಕು. ಅಂದರೆ ಅದು 7 ದಿನ ಪಾವತಿ ಮಾಡಿದ ಸಾಂಸ್ಥಿಕ ಕ್ವಾರಂಟೈನ್ ಮತ್ತು ಉಳಿದ 7 ದಿನ ಹೋಂ ಕ್ವಾರಂಟೈನ್.
3. ನೆಗೆಟಿವ್ ಆರ್ ಟಿ-ಪಿಸಿಆರ್ ತಪಾಸಣೆ ವರದಿಯನ್ನು ಪ್ರಯಾಣ ಮಾಡಿ ಬಂದ ನಂತರ ತೋರಿಸಿದರೆ ಸಾಂಸ್ಥಿಕ ಕ್ವಾಂರಟೈನ್ ನಿಂದ ವಿನಾಯ್ತಿ ಪಡೆಯಬಹುದು.
4. ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಮಾಡಿ ಬಂದಿಳಿದ ನಂತರ ರಾಜ್ಯ ಸರ್ಕಾರಗಳು ತಮ್ಮ ಶಿಷ್ಟಾಚಾರ ಪ್ರಕಾರ ಕ್ವಾರಂಟೈನ್ ಗೆ ಒಳಪಡಿಸುವ ಪ್ರಕ್ರಿಯೆ ಮಾಡಬಹುದು.
5. ಪ್ರಯಾಣಿಕರು ಬಂದಿಳಿದ ನಂತರ ಸ್ಕ್ರೀನಿಂಗ್ ಮಾಡುವಾಗ ಕೊರೋನಾ ಲಕ್ಷಣ ಕಂಡುಬಂದರೆ ತಕ್ಷಣವೇ ಪ್ರತ್ಯೇಕಿಸಿ ಶಿಷ್ಟಾಚಾರ ಪ್ರಕಾರ ವೈದ್ಯಕೀಯ ಆರೈಕೆಗೆ ಕರೆದೊಯ್ಯಲಾಗುತ್ತದೆ.

SCROLL FOR NEXT