ದೇಶ

ರಾಮ ಮಂದಿರ ಭೂಮಿ ಪೂಜೆ ಮಹೋತ್ಸವಕ್ಕೆ ಅಯೋಧ್ಯೆಗೆ ಅಲಂಕಾರ: ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಭಕ್ತರ ಕಾತುರ

Srinivas Rao BV

ಅಯೋಧ್ಯೆ: ರಾಮ ಮಂದಿರ ಭೂಮಿ ಪೂಜೆಯನ್ನು ಒಂದು ಮಹೋತ್ಸವದ ರೀತಿಯಲ್ಲಿ ದೇಶದ ಜನ ಸಂಭ್ರಮಿಸುತ್ತಿದ್ದು, ರಾಮ ಹುಟ್ಟಿದ ನಾಡು ಅಯೋಧ್ಯೆ ನಗರ ಅಲಂಕಾರದಿಂದ ಕಂಗೊಳಿಸುತ್ತಿದೆ. 

ಮಧ್ಯಾಹ್ನ 12:30 ರ ಆಸುಪಾಸಿನಲ್ಲಿ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. 

ಇದಕ್ಕೂ ಮುನ್ನ ಮಂಗಳವಾರದಿಂದ ಹಲವು ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆತಿದ್ದು, ಆ.04 ರ ಸಂಜೆ ದೀಪೋತ್ಸವ, ದೀಪ ಅಲಂಕಾರಗಳಿಂದ ಅಯೋಧ್ಯೆ, ವಿಶೇಷವಾಗಿ ಸರಯೂ ನದಿ ಬಳಿ ಇರುವ ಘಾಟ್ ಗಳು ಕಂಗೊಳಿಸುತ್ತಿದ್ದವು. 

ಅಯೋಧ್ಯೆಯಷ್ಟೇ ಅಲ್ಲದೇ ದೇಶದ ವಿವಿಧ ಪ್ರಮುಖ ದೇವಾಲಯಗಳಲ್ಲಿಯೂ ದೀಪೋತ್ಸವ ನಡೆದಿದ್ದು ವಿಶೇಷ  ಅಲಂಕಾರ ನೆರವೇರಿಸಲಾಗಿದೆ. 

ದೀಪೋತ್ಸವದ ಭಾಗವಾಗಿ ಮಧ್ಯಪ್ರದೇಶದ ಮಹಾಕಾಲೇಶ್ವರ ದೇವಾಲಯದಲ್ಲಿ ದೀಪಗಳನ್ನು ಬೆಳಗಲಾಯಿತು. 

ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ! 

ಅಯೋಧ್ಯೆಯ ರಾಮನಿಗೂ ನೇಪಾಳಕ್ಕೂ ಅವಿನಾಭಾವ ಸಂಬಂಧ. ಪ್ರಭು ರಾಮನ ಪತ್ನಿ ಸೀತಾಮಾತೆಯ ಜನ್ಮ ಸ್ಥಳ ಇರುವುದು, ಜನಕ ರಾಜನ ಅರಮನೆ ಇದ್ದದ್ದು ಇಂದಿನ ನೇಪಾಳವಿರುವ ಪ್ರದೇಶದಲ್ಲಿ ಎಂಬುದು ನಂಬಿಕೆ. ಈಗ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿರುವ ಭೂಮಿ ಪೂಜೆ ಕಾರ್ಯಕ್ರಮದ ನಿಮಿತ್ತ ನೇಪಾಳದಲ್ಲೂ ವಿಶೇಷ ಪೂಜೆ ನಡೆಸಲಾಗುತ್ತಿದೆ. 

ಭವ್ಯ ರಾಮ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಹಾಗೂ ಷೋಡಶೋಪಚಾರ ಪೂಜೆ ನೆರವೇರಿಸಲಾಗುತ್ತಿದೆ. 

SCROLL FOR NEXT