ದೇಶ

ಧ್ವಜಾರೋಹಣ ವಿಚಾರದಲ್ಲಿ ಘರ್ಷಣೆ: ಪ.ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ, ಟಿಎಂಸಿ ಭಾಗಿ ಶಂಕೆ 

Sumana Upadhyaya

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜ ಹಾರಿಸಿದ ವಿಚಾರದಲ್ಲಿ ಕಲಹ ನಡೆದು ಬಿಜೆಪಿ ಕಾರ್ಯಕರ್ತರೊಬ್ಬರನ್ನು ಟಿಎಂಸಿ ಬೆಂಬಲಿಗರು ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹತ್ಯೆಗೊಂಡ ಬಿಜೆಪಿ ಕಾರ್ಯಕರ್ತ 40 ವರ್ಷದ ಸುದರ್ಶನ್ ಪ್ರಾಮಾಣಿಕ್ ಎಂಬುವವರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ನಿನ್ನೆ ಅಪರಾಹ್ನ ಹೂಗ್ಲಿ ಜಿಲ್ಲೆಯ ಖನಕುಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 
ಧ್ವಜಾರೋಹಣ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಮಾತಿಗೆ ಮಾತು ಬೆಳೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ಓರ್ವ ಬಿಜೆಪಿ ಕಾರ್ಯಕರ್ತ ಮೃತಪಟ್ಟಿದ್ದು ನಾವು 8 ಮಂದಿಯನ್ನು ಬಂಧಿಸಿದ್ದೇವೆ. ತನಿಖೆ ಆರಂಭಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಆದರೆ ಟಿಎಂಸಿ ಆರೋಪವನ್ನು ನಿರಾಕರಿಸಿದೆ. 

ಖಾನಕುಲ್ ಪ್ರದೇಶದಲ್ಲಿ ಧ್ವಜ ಹಾರಿಸಿದ್ದಕ್ಕೆ ಟಿಎಂಸಿ ಕಾರ್ಯಕರ್ತರು ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ದಿನ ಕೂಡ ನಮ್ಮ ಕಾರ್ಯಕರ್ತರನ್ನು ಅವರು ಸುಮ್ಮನೆ ಬಿಟ್ಟಿಲ್ಲ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಆದರೆ ಟಿಎಂಸಿ ಆರೋಪವನ್ನು ನಿರಾಕರಿಸಿದೆ. ಪಕ್ಷದ ವಕ್ತಾರ ಪ್ರಬಿರ್ ಘೋಸಲ್, ಬಿಜೆಪಿಯೊಳಗಿನ ಜಗಳದಿಂದಾಗಿ ಕಾರ್ಯಕರ್ತ ಮೃತಪಟ್ಟಿದ್ದಾರೆ. ಇದರಲ್ಲಿ ಟಿಎಂಸಿ ಕಾರ್ಯಕರ್ತರ ಪಾತ್ರವೇನೂ ಇಲ್ಲ ಎಂದಿದ್ದಾರೆ. 

ಘರ್ಷಣಾ ನಿರತ ಗುಂಪನ್ನು ಚದುರಿಸಿ ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಬಂದು ಲಾಠಿಚಾರ್ಜ್ ನಡೆಸಬೇಕಾಯಿತು. 

SCROLL FOR NEXT