ದೇಶ

ನಿವೃತ್ತ ನ್ಯಾಯಮೂರ್ತಿ ರಂಜನ್‌ ಗೊಗೊಯ್ ವಿರುದ್ಧದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Srinivasamurthy VN

ನವದೆಹಲಿ: ಸುಪ್ರೀಂ ಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್ ವಿರುದ್ಧದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ರಂಜನ್‌ ಗೊಗೊಯ್ ಅವರು ನಡೆದುಕೊಂಡ ರೀತಿ ಬಗ್ಗೆ ತನಿಖೆ ನಡೆಸಲು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಈ ಅರ್ಜಿಯ ಕುರಿತು  ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು 'ಫಲದಾಯಕವಲ್ಲದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
    
‘ಎರಡು ವರ್ಷಗಳಿಂದ ಏಕೆ ಈ ಸಂಬಂಧ ಅರ್ಜಿ ಸಲ್ಲಿಸಲಿಲ್ಲ. ಗೊಗೊಯಿ ಅವರು ಈಗಾಗಲೇ ನಿವೃತ್ತಿಯಾಗಿದ್ದಾರೆ. ಹಾಗಾಗಿ ಈಗ ಅರ್ಜಿ ಸಲ್ಲಿಸಿರುವುದು ಅಪ್ರಸ್ತುತ ಮತ್ತು ಫಲದಾಯಕವಲ್ಲದ್ದಾಗಿದೆ. ಇಂತಹ ಯಾವುದೇ ರೀತಿಯ ಫಲದಾಯಕವಲ್ಲದ ಅರ್ಜಿಗಳನ್ನು ನಾವು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ.   ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ  ನೇತೃತ್ವದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಹೇಳಿದೆ.  

ಅರುಣ್‌ ರಾಮಚಂದ್ರ ಹುಬ್ಲಿಕರ್‌ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠವು ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಈಶಾನ್ಯ ಭಾರತದಿಂದ ಆಯ್ಕೆಯಾದ ಮೊದಲ ನ್ಯಾಯಾಧೀಶ ಎಂಬ ಕೀರ್ತಿಗೆ ರಂಜನ್ ಗೊಗೊಯ್ ಅವರು ಪಾತ್ರರಾಗಿದ್ದರು. ಅಲ್ಲದೆ ಅಯೋಧ್ಯೆಯಂತಹ ದಶಕಗಳಿಂದ ವಿಚಾರಣೆ ಹಂತದಲ್ಲಿದ್ದ ಹಲವು ಪ್ರಮುಖ ಪ್ರಕರಣಗಳ ತೀರ್ಪು ನೀಡಿದ್ದರು. ಗೊಗೊಯ್  ಅವರು ಕಳೆದ ವರ್ಷ ನವೆಂಬರ್ 17ರಂದು ನಿವೃತ್ತಿಯಾಗಿದ್ದರು.
 

SCROLL FOR NEXT