ದೇಶ

ನೂತನ ಅಧ್ಯಕ್ಷರ ಆಯ್ಕೆಯತ್ತ ಕಾಂಗ್ರೆಸ್ ನಾಯಕರ ಚಿತ್ತ: ಕರ್ನಾಟಕ ಪಾಲಾಗಲಿದೆಯಾ ಎಐಸಿಸಿ ಅಧ್ಯಕ್ಷ ಸ್ಥಾನ.!?

Srinivasamurthy VN

ಬೆಂಗಳೂರು: ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಭಾರಿ ಸದ್ದುಮಾಡುತ್ತಿದ್ದು, ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ರೇಸ್ ನಲ್ಲಿದೆ.

ಎಐಸಿಸಿ ಅಧ್ಯಕ್ಷರನ್ನು ಬದಲಾಯಿಸಿ ಯುವ ಪೀಳಿಗೆಗೆ ಅವಕಾಶ ನೀಡಬೇಕೆಂದು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ ಹಿರಿಯ ನಾಯಕರು ಪತ್ರ ಬರೆದು ಸೋನಿಯಾ ಗಾಂಧಿ ಅವರಿಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್​ನ ಮಧ್ಯಂತರ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ನಾಳೆ (ಸೋಮವಾರ) ತಮ್ಮ  ಸ್ಥಾನವನ್ನು ತ್ಯಜಿಸಲಿದ್ದು, ನೂತನ ಅಧ್ಯಕ್ಷರ ಆಯ್ಕೆಯನ್ನು ಕಾರ್ಯಕಾರಿ ಸಮಿತಿ ಮಾಡಲಿದೆ ಎನ್ನಲಾಗಿದೆ. 

ಕೆಲವು ವಾರಗಳ ಹಿಂದೆ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಮಾಜಿ ಸಂಸದರು ಸೇರಿದಂತೆ 23 ಹಿರಿಯ ನಾಯಕರು ಪಕ್ಷದ ನಾಯಕತ್ವ ಬದಲಾವಣೆ ಮಾಡುವಂತೆ ಪಕ್ಷಾಧ್ಯಕ್ಷೆಗೆ ಪತ್ರ ಬರೆದು ಪಕ್ಷದಲ್ಲಿ ಕೋಲಾಹಲವನ್ನೇ ಎಬ್ಬಿಸಿದ್ದರು. ಇದೀಗ ನಾಳೆ ಕಾಂಗ್ರೆಸ್ ಕಾರ್ಯಕಾರಿ  ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಮಹತ್ವದ ಮಾತುಕತೆ, ಚರ್ಚೆ ನಡೆಯಲಿದೆ ಎನ್ನಲಾಗಿದೆ. ಬಹುತೇಕ ಹಿರಿಯ ನಾಯಕರು ರಾಹುಲ್ ಗಾಂಧಿಯನ್ನು ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಒಲವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಗಾಂಧಿ ಕುಟುಂಬ  ಸದಸ್ಯರನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ನೀಡುವಂತೆ ಆಗ್ರಹಿಸಿದ್ದಾರೆ.

ರೇಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ
ಗಾಂಧಿ ಕುಟುಂಬದ ಹೊರತಾಗಿ ಬೇರಯವರಿಗೆ ಪಕ್ಷದ ಅಧಿಕಾರ ನೀಡಬೇಕೆಂಬ ಚರ್ಚೆ ಪಕ್ಷದ ಒಳವಲಯದಲ್ಲಿ ಕೇಳಿಬರುತ್ತಿವೆ. ಎರಡು ಬಾರಿ ಸಂಸತ್ ಸದಸ್ಯರಾಗಿ ಹಾಗೂ ಒಂದು ಅವಧಿಗೆ ಕೇಂದ್ರದಲ್ಲಿ ಪ್ರತಿಪಕ್ಷದ ನಾಯಕರಾಗಿ ತಮ್ಮದೇ ಆದ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟ  ಮಾಡಿರುವ ಹಿರಿಯ ನಾಯಕ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೆಸರು ಸಹ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ಖರ್ಗೆ ಮಾತ್ರವಲ್ಲದೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್ ಅವರ ಹೆಸರೂ ಕೂಡ ಎಐಸಿಸಿ ಅಧ್ಯಕ್ಷಗಾದಿ ರೇಸ್ ನಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.

SCROLL FOR NEXT