ದೇಶ

"ರಂಜನ್ ಗೊಗೊಯಿ ಬಿಜೆಪಿಯ ಅಸ್ಸಾಂ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ"

Srinivas Rao BV

ಗುವಾಹಟಿ: ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಅಸ್ಸಾಂನ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅಸ್ಸಾಂ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಭವಿಷ್ಯ ನುಡಿದಿದ್ದಾರೆ.

ಬಿಜೆಪಿಯ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ರಂಜನ್ ಗೊಗೊಯಿ ಹೆಸರಿದೆ ಎಂದು ತಮಗೆ ಬಲ್ಲ ಮೂಲಗಳಿಂದ ತಿಳಿದಿದೆ. ಖಂಡಿತವಾಗಿಯೂ ಅವರನ್ನು ಅಸ್ಸಾಂನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಲಿದೆ ಎಂದು ತರುಣ್ ಗೊಗೊಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾಜಿ ಮುಖ್ಯನ್ಯಾಯಮೂರ್ತಿ ಗೊಗೊಯಿ ರಾಜ್ಯಸಭೆ ಸದಸ್ಯತ್ವವನ್ನು ಒಪ್ಪಿಕೊಳ್ಳುವುದಾದರೆ ಅವರು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನವನ್ನೂ ಒಪ್ಪಿಕೊಳ್ಳಲಿದ್ದಾರೆ ಎಂದು ತರುಣ್‌ ಹೇಳಿದರು.

ಅಯೋಧ್ಯೆ ರಾಮ ಮಂದಿರ ತೀರ್ಪಿನ ವಿಚಾರವಾಗಿ ಬಿಜೆಪಿಗೆ ರಂಜನ್ ಗೋಗೋಯ್ ಅವರ ಬಗ್ಗೆ ಅತ್ಯಂತ ಸಂತೋಷವಾಗಿದೆ. ಅಯೋಧ್ಯೆ ತೀರ್ಪಿನ ಬಳಿಕ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಳ್ಳುವ ಮೂಲಕ ರಂಜನ್ ಗೋಗೋಯ್ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದರು. ಒಂದು ವೇಳೆ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲವೆಂದಾದರೆ ಅವರು ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ರಂಜನ್ ಗೋಗೋಯ್ ಅವರು ನಿವೃತ್ತಿಯ ಬಳಿಕಮಾನವ ಹಕ್ಕುಗಳು ಸೇರಿದಂತೆ ಬೇರೆ ಯಾವುದೇ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಬಹುದಿತ್ತು. ಆದರೆ ಹಾಗೆ ಮಾಡದೇ ರಾಜಕೀಯ ಮಹತ್ವಾಕಾಂಕ್ಷೆಯಿಂದಾಗಿ ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡರು ಎಂದು ಅಸ್ಸಾಂ ನ ಮಾಜಿ ಸಿಎಂ ತರುಣ್ ಗೊಗೋಯ್ ಹೇಳಿದ್ದಾರೆ. 

ಇದೇ ವೇಳೆ ತಾವು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದಿಲ್ಲ ಎಂದೂ ತರುಣ್ ಗೊಗೋಯ್ ಸ್ಪಷ್ಟಪಡಿಸಿದ್ದಾರೆ. 

SCROLL FOR NEXT