ಅಮೃತಸರ: ಪಂಜಾಬ್ ಅಧಿವೇಶನಕ್ಕೂ ಮುನ್ನವೇ ಆ ರಾಜ್ಯದ 23 ಶಾಸಕರಿಗೆ ಮಾರಕ ಕೊರೋನಾ ವೈರಸ್ ಸೋಂಕು ಒಕ್ಕರಿಸಿದ್ದು, ಪಂಜಾಬ್ ಅಧಿವೇಶನದ ಮೇಲೆ ಕರಿ ನೆರಳು ಬೀರಿದೆ.
ಈ ಬಗ್ಗೆ ಸ್ವತಃ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ಮಾಹಿತಿ ನೀಡಿದ್ದು, ಈ ವರೆಗೂ ಪಂಜಾಬ್ ನ 23 ಶಾಸಕರು ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಇದೇ ಕಾರಣಕ್ಕೆ ಇದೀಗ ರಾಜ್ಯದಲ್ಲಿರುವ ಎಲ್ಲ ಶಾಸಕರನ್ನೂ ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ. ಪಂಜಾಬ್ ನಲ್ಲಿ ಒಟ್ಟು 117 ಶಾಸಕರಿದ್ದು, ಈ ಪೈಕಿ 23 ಮಂದಿ ಶಾಸಕರು ಸೋಂಕಿಗೆ ತುತ್ತಾಗಿದ್ದಾರೆ. ಆಗಸ್ಟ್ 28ರಂದು ಪಂಜಾಬ್ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಪಂಜಾಬ್ ನಲ್ಲಿ ಶಾಸಕರು ಮಾತ್ರವಲ್ಲದೇ ಸಚಿವರೂ ಕೂಡ ಸೋಂಕಿಗೆ ತುತ್ತಾಗಿದ್ದು, ಗ್ರಾಮೀಣಾಭಿವದ್ಧಿ ಸಚಿವ ಟ್ರಿಪ್ಟ್ ರಾಜಿಂದರ್ ಬಜ್ವಾ ಅವರು ಸೋಂಕಿಗೆ ತುತ್ತಾದ ಮೊದಲ ಸಚಿವರಾಗಿದ್ದಾರೆ. ಬಳಿಕ ಸಹಕಾರ ಸಚಿವ ಸುಖ್ಜಿಂದರ್ ಸಿಂಗ್ ರಾಂಧವ, ಕಂದಾಯ ಸಚಿವ ಗುರುಪ್ರೀತ್ ಕಂಗಾರ್ ಮತ್ತು ಕೈಗಾರಿಕಾ ಸಚಿವ ಶಾಮ್ ಸುಂದರ್ ಅರೋರಾ ಅವರು ಸೋಂಕಿಗೆ ತುತ್ತಾಗಿದ್ದಾರೆ.