ದೇಶ

ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಒದಗಿಸಲಾಗುತ್ತಿಲ್ಲ: ಶಿವಸೇನೆ ಸಂಸದ ಸಂಜಯ್ ಜಾಧವ್ ರಾಜೀನಾಮೆ

Shilpa D

ಮುಂಬೈ: ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ,’ ಎಂದು ಹೇಳಿರುವ ಮಹಾರಾಷ್ಟ್ರ ಪರಭಾನಿ ಕ್ಷೇತ್ರದ ಶಿವಸೇನೆ ಸಂಸದ ಸಂಜಯ್ ಜಾಧವ್ ಸಂಸತ್‌ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. 

ಸಂಜಯ್ ಜಾಧವ್ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರವಾನಿಸಿದ್ದಾರೆ. ‘ನನ್ನ ಕ್ಷೇತ್ರದ ಶಿವಸೇನೆ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದ ಮೇಲೆ ಸಂಸದನಾಗಿರಲು ನನಗೆ ಯಾವುದೇ ಹಕ್ಕಿಲ್ಲ. ಆದ್ದರಿಂದ,  ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿ’ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ. 

ಪರಭಾನಿ ಜಿಲ್ಲೆಯ ಜಿಂತೂರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಸರ್ಕಾರೇತರ ಆಡಳಿತಾಧಿಕಾರಿ ನೇಮಕಕ್ಕೆ ಜಾಧವ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪರಭಾನಿಯ ಜಿಂತೂರ್ ಎಪಿಎಂಸಿಯ ಆಡಳಿತಾಧಿಕಾರಿಗಳ ನೇಮಕ ಕುರಿತು ನಾನು ಕಳೆದ 8-10 ತಿಂಗಳಿಂದ ಪ್ರಯತ್ನ ನಡೆಸುತ್ತಾ ಬಂದಿದ್ದೇನೆ. ಈಗ ಎನ್‌ಸಿಪಿಯ ವ್ಯಕ್ತಿಯೊಬ್ಬರನ್ನು ಸರ್ಕಾರೇತರ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದು ಶಿವಸೇನೆ ಕಾರ್ಯಕರ್ತರಿಗೆ ಮಾಡಿದ ಅವಮಾನ' ಎಂದು ತಿಳಿಸಿರುವ ಜಾಧವ್‌, ನನ್ನಕ್ಷೇತ್ರದ ಶಿವಸೇನೆ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ ಎಂದಮೇಲೆ ಸಂಸದನಾಗಿರಲು ನನಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ.
 

SCROLL FOR NEXT