ದೇಶ

ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ: ಎರಡನೇ ಹಂತದ ಮತದಾನ ಪ್ರಗತಿಯಲ್ಲಿ, 321 ಅಭ್ಯರ್ಥಿಗಳು ಕಣದಲ್ಲಿ!

Sumana Upadhyaya

ಶ್ರೀನಗರ: ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಎರಡನೇ ಹಂತದ ಮತದಾನ ಪ್ರಗತಿಯಲ್ಲಿದ್ದು ಚಳಿಯ ನಡುವೆ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ತೀವ್ರ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆ ತೀವ್ರ ಚಳಿ ಇದ್ದ ಕಾರಣ ಕೆಲವರಷ್ಟೇ ಬಂದು ತಮ್ಮ ಹಕ್ಕು ಚಲಾಯಿಸುವುದು ಕಂಡುಬಂತು. ಇನ್ನಷ್ಟೇ ಮತದಾನ ಚುರುಕಾಗಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡನೇ ಹಂತದಲ್ಲಿ 321 ಅಭ್ಯರ್ಥಿಗಳು ಕಣದಲ್ಲಿದ್ದು, 2,142 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 7 ಲಕ್ಷದ 90 ಸಾವಿರ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಜಮ್ಮು-ಕಾಶ್ಮೀರದ 280 ಕ್ಷೇತ್ರಗಳಲ್ಲಿ 43 ಕ್ಷೇತ್ರಗಳು ಇಂದು ಚುನಾವಣೆಯನ್ನು ಎದುರಿಸುತ್ತಿದ್ದು, 25 ಕ್ಷೇತ್ರಗಳು ಕಾಶ್ಮೀರದಲ್ಲಿ ಮತ್ತು 18 ಕ್ಷೇತ್ರಗಳು ಜಮ್ಮು ವಿಭಾಗದಲ್ಲಿವೆ.

83 ಸರ್ಪಂಚ್ ಕ್ಷೇತ್ರಗಳು ಸಹ ಚುನಾವಣೆ ಎದುರಿಸುತ್ತಿದ್ದು 223 ಅಭ್ಯರ್ಥಿಗಳು ಎರಡನೇ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ. 700ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಜಮ್ಮು-ಕಾಶ್ಮೀರದ 1300 ಮತ ಕೇಂದ್ರಗಳನ್ನು ಸೂಕ್ಷ್ಮವೆಂದು ಅಧಿಕಾರಿಗಳು ಘೋಷಿಸಿದ್ದಾರೆ. ಜಮ್ಮು-ಕಾಶ್ಮೀರದ ಸಾಮಾನ್ಯ ಎಲ್ಲಾ ಮತಗಟ್ಟೆಗಳು ಸೂಕ್ಷ್ಮವಾಗಿವೆ. ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಕೆ ಕೆ ಶರ್ಮ ತಿಳಿಸಿದ್ದಾರೆ.

ಇನ್ನೊಂದೆಡೆ ಪುಣೆ ಪದವೀಧರ ಕೇತ್ರಕ್ಕೆ ಸಹ ಚುನಾವಣೆ ನಡೆಯುತ್ತಿದೆ. 

SCROLL FOR NEXT