ದೇಶ

ಮದುವೆಗೂ ಮುನ್ನ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ, ಆತಂಕದಲ್ಲಿ ದಂಪತಿ!

Vishwanath S

ಯಮುನಾನಗರ್: ಮದುವೆಗೂ ಮುನ್ನ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ ಮತ್ತು ಆತನ ಪತ್ನಿ ಪೊಲೀಸ್ ರಕ್ಷಣೆಯಲ್ಲಿದ್ದಾರೆ.

ಮದುವೆಯ ಸೋಗಿನಲ್ಲಿ ಧಾರ್ಮಿಕ ಮತಾಂತರಗಳು ನಡೆಯುತ್ತಿದೆ ಎಂದು ಬಿಜೆಪಿ ನಾಯಕರು ಬಳಸುವ 'ಲವ್ ಜಿಹಾದ್' ವಿರುದ್ಧ ಕಾನೂನು ರೂಪಿಸಲು ಹರಿಯಾಣ ಸರ್ಕಾರ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಕಳೆದ ವಾರ ಹೇಳಿದ್ದರು.

ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ 21 ವರ್ಷದ ಯುವಕ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದು, ಹಿಂದೂ ಆಚರಣೆಗಳ ಪ್ರಕಾರ ನವೆಂಬರ್ 9ರಂದು 19 ವರ್ಷದ ಹಿಂದೂ ಯುವತಿಯನ್ನು ವಿವಾಹವಾಗಿದ್ದರು ಎಂದು ಯಮುನಾನಗರ ಪೊಲೀಸ್ ವರಿಷ್ಠಾಧಿಕಾರಿ ಕಮಲ್ದೀಪ್ ಗೋಯಲ್ ತಿಳಿಸಿದ್ದಾರೆ.

ಬಾಲಕಿಯ ಕುಟುಂಬದಿಂದ ತಮ್ಮ ಜೀವಕ್ಕೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಭಯದಿಂದ ದಂಪತಿಗಳು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಹೀಗಾಗಿ ಹೈಕೋರ್ಟ್ ದಂಪತಿಗೆ ರಕ್ಷಣೆ ನೀಡುವಂತೆ ಸೂಚಿಸಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಇವರಿಬ್ಬರನ್ನು ಹಲವಾರು ದಿನಗಳ ಕಾಲ ರಕ್ಷಣಾ ಮನೆಯೊಂದರಲ್ಲಿ ಇಟ್ಟಿದ್ದರು.

ಪೊಲೀಸರು ಯುವತಿಯ ಕುಟುಂಬವನ್ನೂ ಭೇಟಿಯಾಗಿ ಇಬ್ಬರು ಕಾನೂನುಬದ್ಧವಾಗಿ ವಿವಾಹವಾದರು ಮತ್ತು ಅವರ ಇಚ್ಛೆಯಂತೆ ಒಟ್ಟಿಗೆ ವಾಸಿಸಲು ಅವಕಾಶ ನೀಡಬೇಕು ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು ಎಂದು ಎಸ್ ಪಿ ಹೇಳಿದ್ದರು.

ಯುವತಿ ಈ ಮೊದಲು ತನ್ನ ಕುಟುಂಬವನ್ನು ಭೇಟಿಯಾಗಲು ನಿರಾಕರಿಸಿದ್ದಳು. ಆದರೆ ನವೆಂಬರ್ 11ರಂದು ನಡೆದ ಪ್ರಕರಣದ ವಿಚಾರಣೆಯ ವೇಳೆ ಕುಟುಂಬವನ್ನು ಒಮ್ಮೆ ಭೇಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಗಿ ಹೇಳಿದ್ದಾರೆ. 

SCROLL FOR NEXT