ದೇಶ

ಸಚಿವ ಅನಿಲ್ ವಿಜ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿರಲಿಲ್ಲ: ಭಾರತ ಬಯೋಟೆಕ್ ಸ್ಪಷ್ಟನೆ!

Srinivasamurthy VN

ನವದೆಹಲಿ: ಕೊರೋನಾ ಸೋಂಕಿಗೆ ತುತ್ತಾಗಿರುವ ಹರ್ಯಾಣ ಸಚಿವ ಅನಿಲ್ ವಿಜ್ ಕೊರೋನಾ ವೈರಸ್ ಲಸಿಕೆಯ 2ನೇ ಡೋಸ್ ಅನ್ನು ಪಡೆದಿರಲಿಲ್ಲ ಎಂದು ಕೋವ್ಯಾಕ್ಸಿನ್ ಲಸಿಕೆಯ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಸ್ಪಷ್ಟನೆ ನೀಡಿದೆ.

ಇಂದು ಬೆಳಗ್ಗೆ ಹರ್ಯಾಣದ ಸಚಿವ ಅನಿಲ್ ವಿಜ್ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ, ಕಳೆದ 10 ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದವರು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆಗೊಳಪಡುವಂತೆ ಮನವಿ ಮಾಡಿದ್ದರು. ಈ ಹಿಂದೆ  ಇದೇ ಅನಿಲ್ ವಿಜ್ ಅವರು, ಕಳೆದ ನವೆಂಬರ್ 20ರಂದು ಕೋವ್ಯಾಕ್ಸಿನ್ ಕೊರೋನಾ ಲಸಿಕೆಯ 3ನೇ ಹಂತದ ಪರೀಕ್ಷೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು, ಹರ್ಯಾಣದ ಆಂಬಾಲದಲ್ಲಿ ನಡೆದಿದ್ದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಲಸಿಕೆಯ ಒಂದು ಡೋಸ್ ಅನ್ನು ಹಾಕಿಸಿಕೊಳ್ಳುವ  ಮೂಲಕ ಪ್ರಯೋಗಕ್ಕೆ ಒಳಪಟ್ಟಿದ್ದರು. 

ಇದಾಗ್ಯೂ ಸಚಿವರಿಗೆ ಸೋಂಕು ಒಕ್ಕರಿಸಿರುವುದು ಲಸಿಕೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುವಂತಿದೆ. ಅತ್ತ ಅನಿಲ್ ವಿಜ್ ಸೋಂಕಿಗೆ ತುತ್ತಾದ ಬೆನ್ನಲ್ಲೇ ಕೋವ್ಯಾಕ್ಸಿನ್ ಪರಿಣಾಮಕಾರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಇದೀಗ ಈ ಚರ್ಚೆಗಳಿಗೆ ತೆರೆ ಎಳೆಯುವ  ಪ್ರಯತ್ನ ಮಾಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತ್ ಬಯೋಟೆಕ್ ಸಂಸ್ಥೆ, 'ಕೋವ್ಯಾಕ್ಸಿನ್ ಲಸಿಕೆಯ ಪರೀಕ್ಷಾರ್ಥ ಪ್ರಯೋಗ, 28 ದಿನಗಳ ಅಂತರದಲ್ಲಿ ನೀಡಲಾಗುವ ಎರಡು ಡೋಸ್​​​ಗಳ ಶೆಡ್ಯೂಲ್ ಆಧರಿಸಿದ್ದಾಗಿದೆ. ವ್ಯಕ್ತಿಗೆ ಎರಡನೇ ಡೋಸ್​ ನೀಡಿದ 14 ದಿನಗಳ ಬಳಿಕ, ಲಸಿಕೆ ಎಷ್ಟು  ಪರಿಣಾಮಕಾರಿಯಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಸ್ವಯಂ ಸೇವಕರು ಎರಡೂ ಡೋಸ್​​ ಪಡೆದ ನಂತರವಷ್ಟೇ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದೆ.

ಕಳೆದ ನವೆಂಬರ್​ 20ರಂದು ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗ ಆರಂಭವಾದ ದಿನ ಸಚಿವ ಅನಿಲ್​ ವಿಜ್ ತಾವೇ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡಿದ್ದರು. ಈ ಮೂಲಕ ಮೂರನೇ ಹಂತದ ಕ್ಲೀನಿಕಲ್ ಟ್ರಯಲ್​ನಲ್ಲಿ ಕೋವ್ಯಾಕ್ಸಿನ್  ಲಸಿಕೆ ಪಡೆದ ಮೊದಲ ವಾಲಂಟಿಯರ್​ ಆಗಿದ್ದರು. 28 ದಿನಗಳ ನಂತರ ಅವರಿಗೆ ಎರಡನೇ ಡೋಸ್​ ನೀಡಬೇಕಿತ್ತು. ಆದರೆ ಅದಕ್ಕೂ ಮೊದಲೇ ಅವರಿಗೆ ಸೋಂಕು ಒಕ್ಕರಿಸಿದೆ. ಸದ್ಯ ಅವರು ಅಂಬಾಲಾದಲ್ಲಿರುವ ಕ್ಯಾಂಟ್​​ ಸಿವಿಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

SCROLL FOR NEXT