ದೇಶ

ಕೃಷಿ ಕಾಯಿದೆ ವಿರೋಧಿಸಿ ಪ್ರತಿಪಕ್ಷಗಳ ನಾಯಕರಿಂದ ರಾಷ್ಟ್ರಪತಿ ಭೇಟಿ: ಶರದ್ ಪವಾರ್

Lingaraj Badiger

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಬುಧವಾರ ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ರಾಷ್ಟ್ರಪತಿ ಭೇಟಿಗೂ ಮುನ್ನ ಎಲ್ಲಾ ಪ್ರತಿಪಕ್ಷಗಳ ನಾಯಕರು ಸಭೆ ಸೇರಿ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಿ ಒಮ್ಮತದ ನಿಲುವು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಹೊಸ ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ಇಂದು ಕರೆ ನೀಡಿದ್ದ ಭಾರತ್ ಬಂದ್ ಗೆ ಎನ್ ಸಿಪಿ, ಕಾಂಗ್ರೆಸ್ ಹಾಗೂ ಎಎಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು. ಇದೀಗ ರಾಷ್ಟ್ರಪತಿ ಭೇಟಿಗೆ ಮುಂದಾಗಿರುವ ಪ್ರತಿಪಕ್ಷಗಳು, ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ರಾಮನಾಥ್ ಕೋವಿಂದ್ ಅವರಿಗೆ ಮನವಿ ಮಾಡಲಿವೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಶರದ್ ಪವಾರ್ ಹಾಗೂ ಎಡಪಕ್ಷಗಳ ನಾಯಕ ಸೀತಾರಾಂ ಯೆಚೂರಿ ಅವರನ್ನೊಳಗೊಂಡ ಪ್ರತಿಪಕ್ಷಗಳ ನಿಯೋಗ ನಾಳೆ ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ.

SCROLL FOR NEXT