ದೇಶ

ಕಾರ್ತಿ ಚಿದಂಬರಂ ದಂಪತಿ ವಿರುದ್ಧ ಆದಾಯ ತೆರಿಕೆ ಇಲಾಖೆ ಕ್ರಮಕ್ಕೆ ಹೈಕೋರ್ಟ್ ತಡೆ

Srinivas Rao BV

ಸಂಸದ ಕಾರ್ತಿ ಚಿದಂಬರಂ ದಂಪತಿ ವಿರುದ್ಧ ಆದಾಯ ತೆರಿಗೆ ಇಲಾಖೆ ಜರುಗಿಸಬೇಕಿದ್ದ ಕ್ರಮಗಳಿಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. 

ಚೆನ್ನೈ ಬಳಿ ಇದ್ದ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ 7 ಕೋಟಿ ಮೌಲ್ಯದ ಹಣಕಾಸು ವಹಿವಾಟನ್ನು ಮರೆ ಮಾಚಿ ಆದಾಯ ತೆರಿಗೆ ಪಾವತಿ ಮಾಡಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಕಾರ್ತಿ ದಂಪತಿ ವಿರುದ್ಧ ಕ್ರಮ ಜರುಗಿಸಲು ಮುಂದಾಗಿತ್ತು.

ಇದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದ ಕಾರ್ತಿ ಚಿದಂಬರಂ ದಂಪತಿಗೆ ತಾತ್ಕಾಲಿಕ ರಿಲೀಫ್ ನೀಡಿರುವ ಮದ್ರಾಸ್ ಹೈಕೋರ್ಟ್, ಈಗಲೇ ಕ್ರಮ ಜರುಗಿಸುವುದು ಸೂಕ್ತವಲ್ಲ, ಅಕಾಲಿಕವಾದ ಕ್ರಮವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಮೌಲ್ಯಮಾಪನ ಮಾಡಿದ ಬಳಿಕವೂ ಕ್ರಮ ಜರುಗಿಸುವುದು ಅಗತ್ಯವಾದಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. 

ತಮ್ಮ ವಿರುದ್ಧ ಐಟಿ-ಇಲಾಖೆ ಜರುಗಿಸಿದ್ದ ಕ್ರಮವನ್ನು ರದ್ದುಗೊಳಿಸಬೇಕೆಂದು ಕಾರ್ತಿ ಚಿದಂಬರಂ ದಂಪತಿ ಕೋರ್ಟ್ ಮೆಟ್ಟಿಲೇರಿದ್ದರು. ಆದಾಯ ತೆರಿಗೆ ಕಾಯ್ದೆಯಡಿ ಮೌಲ್ಯಮಾಪನ ಮಾಡುವ ಅಧಿಕಾರಿ ಕೈಗೊಳ್ಳುವ ಕ್ರಮಗಳು ಸಿವಿಲ್ ಕೋರ್ಟ್ ಕೈಗೊಳ್ಳುವ ಕ್ರಮಗಳಿಗೆ ಸಮನಾಗಿದೆ.  ಆದ್ದರಿಂದ ಕಾರ್ತಿ ಚಿದಂಬರಂ ದಂಪತಿ ವಿರುದ್ಧ ಆ ಅಧಿಕಾರಿಯೇ ಕ್ರಮ ಜರುಗಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ತನಿಖೆಯ ಉಪನಿರ್ದೇಶಕ ಕಾನೂನು ಕ್ರಮ ಜರುಗಿಸಿದ್ದಾರೆ. ಇದು ಸೂಕ್ತವಲ್ಲ ಎಂದು ಕಾರ್ತಿ ಚಿದಂಬರಂ ವಾದಿಸಿದ್ದರು. ಕೋರ್ಟ್ ಇದನ್ನು ಮಾನ್ಯ ಮಾಡಿದ್ದು ಕಾನೂನು ಪ್ರಕಾರವೇ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದೆ.
 

SCROLL FOR NEXT