ನವದೆಹಲಿ: ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ಕಾಗಿ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ.ಪ್ರತಿದಿನ ಒಂದು ಅವಧಿಯಲ್ಲಿ 100ರಿಂದ 200 ಜನರಿಗೆ ಲಸಿಕೆ ಹಾಕಬೇಕು, ಲಸಿಕೆ ಹಾಕಿದ ನಂತರ ಯಾವುದೇ ಅಡ್ಡ ಪರಿಣಾಮ ಉಂಟಾಗಲಿದೆಯೇ ಎಂಬುದನ್ನು ತಿಳಿಯಲು ಲಸಿಕೆ ನೀಡಿದ ನಂತರ 30 ನಿಮಿಷ ನಿಗಾವಣೆ ವಹಿಸಬೇಕು, ಒಂದು ಸಮಯದಲ್ಲಿ ಕೇವಲ ಒಬ್ಬರನ್ನು ಮಾತ್ರ ಲಸಿಕೆ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಇತ್ತೀಚಿಗೆ ರಾಜ್ಯಗಳಲ್ಲಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಲಸಿಕೆ ಮತ್ತು ಕೊರೊನಾವೈರಸ್ ವಿರೋಧಿ ಲಸಿಕೆಗಳಿಗಾಗಿ ನೈಜ-ಸಮಯದ ಆಧಾರದ ಮೇಲೆ ಸೇರ್ಪಡೆಗೊಂಡ ಫಲಾನುಭವಿಗಳನ್ನು ಪತ್ತೆಹಚ್ಚಲು ಕೋವಿಡ್ ಲಸಿಕೆ ಗುಪ್ತಚರ ಜಾಲ( ಕೋ-ವಿನ್ ) ವ್ಯವಸ್ಥೆಯನ್ನು ಬಳಸಲಾಗುತ್ತದೆ.
ಲಸಿಕೆ ನೀಡುವ ಸ್ಥಳದಲ್ಲಿ ಪೂರ್ವ-ನೋಂದಾಯಿತ ಫಲಾನುಭವಿಗಳಿಗೆ ಮಾತ್ರ ಆದ್ಯತೆಗೆ ಅನುಗುಣವಾಗಿ ಲಸಿಕೆ ನೀಡಲಾಗುವುದು, ಮತ್ತು ಸ್ಥಳದಲ್ಲೇ ನೋಂದಣಿಗೆ ಯಾವುದೇ ಅವಕಾಶವಿರುವುದಿಲ್ಲ.ವಿವಿಧ ಕೋವಿಡ್-19 ಲಸಿಕೆಗಳ ಮಿಶ್ರಣ ತಪ್ಪಿಸಲು ಒಂದು ಜಿಲ್ಲೆಗೆ ಒಬ್ಬರು ಉತ್ಪಾದಕರು ಮಾತ್ರ ಲಸಿಕೆ ಪೂರೈಸಲು ಅವಕಾಶ ಮಾಡಿಕೊಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.
ಲಸಿಕೆ ವಾಹಕ, ಲಸಿಕೆ ಬಾಟಲುಗಳು ಅಥವಾ ಐಸ್ ಪ್ಯಾಕ್‌ಗಳನ್ನು ನೇರವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಫಲಾನುಭವಿಗಳು ಲಸಿಕೆ ಕೇಂದ್ರಕ್ಕೆ ಬರುವವರೆಗೂ ಲಸಿಕೆ ಕ್ಯಾರಿಯರ್ ಮುಚ್ಚಿರುವಂತೆ ನೋಡಿಕೊಳ್ಳುವಂತೆ ಹೇಳಲಾಗಿದೆ.
ಲಸಿಕೆ ನೀಡುವ ಅವಧಿ ಮುಗಿದ ನಂತರ ಐಸ್ ಪ್ಯಾಕ್ ಗಳು ಮತ್ತು ತೆರೆಯದ ಲಸಿಕೆ ಬಾಟಲಿಗಳನ್ನು ಕೋಲ್ಡ್ ಚೈನ್ ಪಾಯಿಂಟ್ ಗಳಿಗೆ ಕಳುಹಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕೆಲವು ಸವಾಲುಗಳನ್ನು ಸಮಯಕ್ಕೆ ಸರಿಯಾಗಿ ಎದುರಿಸುವ ಅಗತ್ಯವಿದ್ದರೂ ಸಹ, ದೇಶವು ಕೋವಿಡ್ -19 ಲಸಿಕೆ ಒದಗಿಸುವ ಹಾದಿಯಲ್ಲಿ ನಿಂತಿದೆ ಎಂದು ಕೇಂದ್ರ ಹೇಳಿದೆ.