ದೇಶ

'ಬೇರೆ ರೈತ ಸಂಘಟನೆಗಳ ಜೊತೆ ಪರ್ಯಾಯ ಮಾತುಕತೆ ನಡೆಸುವುದನ್ನು ನಿಲ್ಲಿಸಿ': ಪ್ರತಿಭಟನಾ ನಿರತ ರೈತ ಮುಖಂಡರಿಂದ ಕೇಂದ್ರಕ್ಕೆ ಪತ್ರ 

Sumana Upadhyaya

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿಸಿರುವ ಸುಮಾರು 40 ರೈತ ಸಂಘಟನೆಗಳು ಬುಧವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ನೂತನ ಕೃಷಿ ಮಸೂದೆ ಬಗ್ಗೆ ಇತರ ರೈತ ಸಂಘಟನೆಗಳೊಂದಿಗೆ ಪರ್ಯಾಯ ಮಾತುಕತೆ ನಡೆಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿವೆ.

ಪಂಜಾಬ್ ನ ಬಹುತೇಕ ರೈತ ಸಂಘಟನೆಗಳನ್ನು ಪ್ರತಿನಿಧಿಸುವ ಸಂಯುಕ್ತ ಕಿಸಾನ್ ಮೋರ್ಚ ಈ ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಹಲವು ರೈತ ಸಂಘಟನೆಗಳ ಜೊತೆ ಪರ್ಯಾಯ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಪತ್ರ ಬರೆದಿದೆ. ಈ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ಸುಧಾರಿತ ಕೃಷಿ ಮಸೂದೆಗಳನ್ನು ಬೆಂಬಲಿಸಿವೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಮತ್ತು ರೈತ ಅಭಿವೃದ್ಧಿ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರಿಗೆ ಬರೆದಿರುವ ಪತ್ರದಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ, ದೆಹಲಿಯ ಹಲವು ಗಡಿಭಾಗಗಳಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ನಿಲ್ಲಿಸಬೇಕು ಎಂದಿದ್ದಾರೆ.

ರೈತರ ಪ್ರತಿಭಟನೆಯನ್ನು ದೂಷಿಸಿ ಹತ್ತಿಕ್ಕುವುದನ್ನು ಪ್ರಯತ್ನಿಸುತ್ತಿರುವುದನ್ನು ಮತ್ತು ರೈತ ಸಂಘಟನೆಗಳ ಜೊತೆ ಪರ್ಯಾಯ ಮಾತುಕತೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯ ದರ್ಶನ್ ಪಾಲ್ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅವರು ತಮ್ಮ ಪತ್ರದಲ್ಲಿ, ಸರ್ಕಾರದ ಇತ್ತೀಚಿನ ಪ್ರಸ್ತಾಪವನ್ನು ರೈತ ಸಂಘಟನೆಗಳು ತಿರಸ್ಕರಿಸಿರುವ ಬಗ್ಗೆ ಕೂಡ ಲಿಖಿತವಾಗಿ ದಾಖಲಿಸಿದ್ದಾರೆ. ಕಳೆದ ಡಿಸೆಂಬರ್ 9ರಂದು ಕೇಂದ್ರ ಸರ್ಕಾರ ನಮ್ಮ ಮುಂದಿಟ್ಟಿದ್ದ ಪ್ರಸ್ತಾವನೆ ಮತ್ತು ನಿಮ್ಮ ಪತ್ರಕ್ಕೆ ಸಂಬಂಧಪಟ್ಟಂತೆ ನಾವು ಸರ್ಕಾರಕ್ಕೆ ಹೇಳಬಯಸುವುದೆಂದರೆ, ರೈತ ಸಂಘಟನೆಗಳು ಜಂಟಿ ಸಭೆ ನಡೆಸಿ ಸರ್ಕಾರದ ಪ್ರಸ್ತಾವನೆಯನ್ನು ಅದೇ ದಿನ ಚರ್ಚಿಸಿ ತಿರಸ್ಕರಿಸಿದೆವು ಎಂದು ಹೇಳಿದ್ದಾರೆ.

ನಾವು ಈ ಹಿಂದಿನ ಮಾತುಕತೆ ವೇಳೆ ಕೂಡ ನಮ್ಮ ನಿಲುವನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದೆವು, ಹೀಗಾಗಿ ನಾವು ಈ ಹಿಂದೆ ಲಿಖಿತವಾಗಿ ನಮ್ಮ ನಿಲುವು ತಿಳಿಸಿರಲಿಲ್ಲ ಎಂದು ಪಾಲ್ ಹೇಳಿದ್ದಾರೆ. 

ನಿನ್ನೆ ಭಾರತೀಯ ಕಿಸಾನ್ ಸಂಘಟನೆ ಪ್ರತಿನಿಧಿಗಳು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಅವರನ್ನು ಭೇಟಿ ಮಾಡಿ ನೂತನ ಮಸೂದೆ ಬಗ್ಗೆ ಸಲಹೆಯ ಮತ್ತು ಕನಿಷ್ಠ ಬೆಂಬಲ ಬೆಲೆಯ ಒಡಂಬಡಿಕೆಯನ್ನು ಸಲ್ಲಿಸಿದರು.

ಉತ್ತರ ಪ್ರದೇಶ ಮೂಲಕ ಭಾರತೀಯ ಕಿಸಾನ್ ಸಂಘಟನೆ ದೆಹಲಿಯಲ್ಲಿ ತನ್ನ ಪ್ರತಿಭಟನೆ ನಿಲ್ಲಿಸಿ ತಮ್ಮ ತಮ್ಮ ಜಿಲ್ಲಾ ಕೇಂದ್ರಗಳಲ್ಲಿ ಮುಂದುವರಿಸಲು ತೀರ್ಮಾನಿಸಿವೆ. 

SCROLL FOR NEXT