ದೇಶ

ನಾಪತ್ತೆಯಾಗಿದ್ದ ಉದ್ಯಮಿಯನ್ನು ಪತ್ತೆ ಹಚ್ಚಿದ ಪೊಲೀಸರು, ಸಾಲಗಾರರಿಂದ ತಪ್ಪಿಸಿಕೊಳ್ಳಲು ರೈತರ ಪ್ರತಿಭಟನೆಯಲ್ಲಿ ಭಾಗಿ

Lingaraj Badiger

ಘಾಜಿಯಾಬಾದ್: ಸಾಲ ಮಾಡಿಕೊಂಡು, ಸಾಲಗಾರರಿಂದ ತಪ್ಪಿಸಿಕೊಳ್ಳಲು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿಯೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ.

ಮುರಾದ್ ನಗರ ಪಟ್ಟಣದ ನಿವಾಸಿ, ಉದ್ಯಮಿ ಪ್ರವೀಣ್ ಅವರು ಡಿಸೆಂಬರ್ 1 ರಂದು ತಮ್ಮ ಮನೆಯಿಂದ ಹೊದವರು ವಾಪಸ್ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೀಣ್ ಅವರು ಈ ಹಿಂದೆಯೂ ಇದೇ ರೀತಿ ನಾಪತ್ತೆಯಾಗಿದ್ದರು. ಆದರೆ ಕೆಲವು ದಿನಗಳ ನಂತರ ಅವರು ಮನೆಗೆ ಮರಳಿದ್ದರು. ಹೀಗಾಗಿ ಅವರ ಮನೆಯವರು ವಾಪಸ್ ಬರಬಹುದು ಎಂದು ಡಿಸೆಂಬರ್ 12 ರವರೆಗೆ ಪೊಲೀಸ್ ದೂರು ನೀಡರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರವೀಣ್ ಅವರ ಮೊಬೈಲ್ ಫೋನ್ ಮೇಲೆ ಕಣ್ಗಾವಲು ಇರಿಸಲಾಗಿತ್ತು ಮತ್ತು ಅವರ ಕಾರು ಪ್ರತಿಭಟನಾ ಸ್ಥಳದ ಬಳಿ ನಿಲ್ಲಿಸಿದ್ದರಿಂದ ಅವರನ್ನು ಪತ್ತೆ ಹಚ್ಚಲು ಸುಲಭವಾಯಿತು ಎಂದು ಪೊಲೀಸ್ ಅಧೀಕ್ಷಕ(ಗ್ರಾಮೀಣ) ಇರಾಜ್ ರಾಜಾ ಪಿಟಿಐಗೆ ತಿಳಿಸಿದ್ದಾರೆ.

"ಪ್ರವೀಣ್ ಅವರು ಗಡ್ಡ ಬಿಟ್ಟಿದ್ದರಿಂದ ಸಿಖ್ ವ್ಯಕ್ತಿಯಂತೆ ಕಾಣುತ್ತಿದ್ದರು. ಆದಾಗ್ಯೂ, ಅವರು ತಮ್ಮ ಕಾರಿನೊಳಗೆ ಹೋಗುತ್ತಿದ್ದನ್ನು ನಾವು ಗುರುತಿಸಿದ್ದೇವೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ವಿಚಾರಣೆ ವೇಳೆ ಅವರು ತಾವು ಸಾಲ ಮಾಡಿಕೊಂಡಿದ್ದರಿಂದ ಸಾಲಗಾರರು ತಮ್ಮ ಸಾಲವನ್ನು ಹಿಂದಿರುಗಿಸುವಂತೆ ಒತ್ತಡ ಹೇರುತ್ತಿದ್ದರು. ಹೀಗಾಗಿ ಅವರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

SCROLL FOR NEXT