ದೇಶ

'ಸುಮ್ಮನೆ ಸಮಯ ಹಾಳು ಮಾಡುತ್ತಿದ್ದೀರಿ': ರಕ್ಷಣಾ ಇಲಾಖೆ ಸಮಿತಿ ಸಭೆಯಲ್ಲಿ ಸಿಟ್ಟಿನಿಂದ ಹೊರನಡೆದ ರಾಹುಲ್ ಗಾಂಧಿ!

Sumana Upadhyaya

ನವದೆಹಲಿ: ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಇತರ ಸದಸ್ಯರು ಮಧ್ಯದಲ್ಲಿಯೇ ಹೊರನಡೆದ ಪ್ರಸಂಗ ನಡೆದಿದೆ.

ದೇಶದ ಭದ್ರತೆಗೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸದೆ ಸೇನಾಪಡೆಯ ಸಿಬ್ಬಂದಿಯ ಸಮವಸ್ತ್ರದ ಬಗ್ಗೆ ಚರ್ಚಿಸಿ ಸಮಯ ಹಾಳು ಮಾಡಲಾಗುತ್ತಿದ್ದೀರಿ ಎಂದು ರಾಹುಲ್ ಗಾಂಧಿ ಮತ್ತು ಇತರ ನಾಯಕರು ಬಿಜೆಪಿಯವರನ್ನು ಆರೋಪಿಸಿದ್ದಾರೆ. ಸಭೆಯಲ್ಲಿ ಪೂರ್ವ ಲಡಾಕ್ ನಲ್ಲಿ ಚೀನಾ ಸೇನೆಯ ಘರ್ಷಣೆ ಮತ್ತು ಅಲ್ಲಿ ಸೇವೆಯಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೆ ಇನ್ನಷ್ಟು ಉತ್ತಮ ಶಸ್ತ್ರಾಸ್ತ್ರಗಳನ್ನು ಹೇಗೆ ಒದಗಿಸಬಹುದು ಎಂದು ಚರ್ಚೆ ನಡೆಸಲು ರಾಹುಲ್ ಗಾಂಧಿ ಮುಂದಾದರು. ಆಗ ಸಮಿತಿಯ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಜುವಲ್ ಒರಮ್ ಅವರು ಅದಕ್ಕೆ ನಿರಾಕರಿಸಿದರು.

ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಭಾರತೀಯ ಸೇನೆಯ ಮೂರೂ ಪಡೆಗಳ ಸಿಬ್ಬಂದಿಗೆ ಸಮವಸ್ತ್ರ ನೀಡುವ ಬಗ್ಗೆ ಚರ್ಚಿಸಲಾಗುತ್ತಿತ್ತು. ಆಗ ಮಧ್ಯೆ ಪ್ರವೇಶಿಸಿದ ರಾಹುಲ್ ಗಾಂಧಿಯವರು ಈ ವಿಷಯವನ್ನು ಚರ್ಚೆ ಮಾಡುತ್ತಾ ಕಾಲಹರಣ ಮಾಡುವ ಬದಲು ದೇಶದ ಭದ್ರತೆ ಮತ್ತು ಲಡಾಕ್ ನಲ್ಲಿ ಚೀನಾ ಸೇನೆಯ ಜೊತೆ ಹೋರಾಡಲು ಸೇನೆಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ರಾಜಕೀಯ ನಾಯಕರು ಚರ್ಚೆ ನಡೆಸಬೇಕೆಂದು ಮಧ್ಯೆ ಪ್ರವೇಶಿಸಿ ಆಕ್ಷೇಪ ವ್ಯಕ್ತಪಡಿಸಿದರು.

ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿನ ಯೋಧರು ಸೇರಿದಂತೆ ಸಿಬ್ಬಂದಿಯ ಸಮವಸ್ತ್ರದ ಬಣ್ಣಗಳ ಕುರಿತು ಸಮಿತಿ ಸಭೆಯಲ್ಲಿ ವಿವರಣೆ ನೀಡಲಾಗುತ್ತಿತ್ತು. ಆಗ ಬಿಜೆಪಿ ಸದಸ್ಯರೊಬ್ಬರು ಅಮೆರಿಕದಲ್ಲಿರುವಂತೆ ಮೂರು ಪಡೆಗಳ ಸಿಬ್ಬಂದಿಯ ಸಮವಸ್ತ್ರದ ಬಣ್ಣದಲ್ಲಿ ಏಕರೂಪತೆಯನ್ನು ತರಬೇಕೆಂದು ಕೋರಿದರು.

ಸೇನಾಪಡೆಯಲ್ಲಿರುವವರೇ ಅವರು ಯಾವ ಬಣ್ಣದ ಯೂನಿಫಾರ್ಮ್ ಧರಿಸಬೇಕೆಂದು ತೀರ್ಮಾನಿಸಬೇಕೆ ಹೊರತು ರಾಜಕೀಯ ನಾಯಕರಲ್ಲ, ಸೇನೆಯವರಿಗೆ ಹೀಗೆ ಧಿರಿಸು ಧರಿಸಿ, ಹಾಗೆ ಮಾಡಿ ಎಂದು ರಾಜಕೀಯ ನಾಯಕರು ಹೇಳುವಂತಿಲ್ಲ. ಇದು ಅವರ ಕಾರ್ಯವ್ಯಾಪ್ತಿಗೆ ಬರುವುದಿಲ್ಲ, ದೇಶದ ಭದ್ರತೆ, ಚಳಿ, ಗಾಳಿ, ಮಳೆಯಲ್ಲಿ ಹೋರಾಡುವ ಯೋಧರಿಗೆ ಅನುಕೂಲವಾಗುವ ಅತ್ಯಾಧುನಿಕ ಉಡುಪು, ಬೂಟ್ಸ್ ಮತ್ತು ಇತರ ಸಾಧನಗಳು, ಮೂಲಸೌಕರ್ಯಗಳ ಬಗ್ಗೆ ಚರ್ಚಿಸಿ ಎಂದು ರಾಹುಲ್ ಗಾಂಧಿ ಕೋರಿದರು ಎಂದು ತಿಳಿದುಬಂದಿದೆ.

ಇದರಿಂದ ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು. ಸಮಿತಿ ಅಧ್ಯಕ್ಷರು ಮುಂದೆ ರಾಹುಲ್ ಗಾಂಧಿಯವರಿಗೆ ಮಾತನಾಡಲು ಬಿಡಲಿಲ್ಲ. ಆಗ ರಾಹುಲ್ ಗಾಂಧಿಯವರು ಹೊರನಡೆಯಲು ನಿರ್ಧರಿಸಿದರು. ಅವರ ಜೊತೆ ಕಾಂಗ್ರೆಸ್ನ ಸಮಿತಿ ಸದಸ್ಯರಾದ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ಕೂಡ ಹೊರನಡೆದರು ಎಂದು ತಿಳಿದುಬಂದಿದೆ. 

SCROLL FOR NEXT