ದೇಶ

ತನ್ನ ದೇಶ 'ಕೈಲಾಸ'ಕ್ಕೆ ಬರಲು, ವಿಮಾನ, ವೀಸಾ ಆಫರ್ ನೀಡಿದ ನಿತ್ಯಾನಂದ!

Shilpa D

ದೆಹಲಿ: ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾನೆ.

ಭಾರತದಿಂದ ತಲೆಮರೆಸಿಕೊಂಡು ಈಕ್ವೆಡಾರ್‌ನಲ್ಲಿ ಆಶ್ರಯ ಪಡೆದಿರುವ  ನಿತ್ಯಾನಂದ, ಇದೀಗ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ತನ್ನ ಭಕ್ತರಲ್ಲಿ ಮನವಿ ಮಾಡಿದ್ದಾನೆ.

ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತರು ವೀಸಾ ಅರ್ಜಿಗಳನ್ನು ಸಲ್ಲಿಸುವಂತೆ ಮನವಿ ಮಾಡಿರುವ ನಿತ್ಯಾನಂದ ಈ ಪ್ರಕ್ರಿಯೆಯ ಹಂತಗಳನ್ನೂ ವಿವರಿಸಿದ್ದಾನೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ನಿತ್ಯಾನಂದ, ಕೈಲಾಸಕ್ಕೆ ಬಂದು ತಲುಪುವ ಬಗೆಯನ್ನೂ ಕೂಡ ವಿವರಿಸಿದ್ದಾನೆ. 

ಕೈಲಾಸದ ಮಾರ್ಗನಕ್ಷೆ ಬಿಡುಗಡೆ ಮಾಡಿರುವ ನಿತ್ಯಾನಂದ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾನೆ. ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತಾದಿಗಳು ಆಸ್ಟ್ರೇಲಿಯಾದ ಸಿಡ್ನಿಗೆ ಬಂದು, ಅಲ್ಲಿಂದ ಚಾರ್ಟರ್ಡ್ ವಿಮಾನದಲ್ಲಿ ಕೈಲಾಸಕ್ಕೆ ಬರುವ ಬಗೆಯನ್ನು ಈ ವಿಡಿಯೋದಲ್ಲಿ ವಿವರಿಸಿದ್ದಾನೆ.
 
ಕೈಲಾಸಕ್ಕೆ ಬರಲು ಗರುಡ ಎಂಬ ವಿಶೇಷ ವಿಮಾನ ಸೇವೆ ಆಸ್ಟ್ರೇಲಿಯಾದಿಂದ ಇರುವುದಾಗಿ ತಿಳಿಸಿದ್ದಾನೆ. ಕೈಲಾಸದಲ್ಲಿ ನೆಲೆಸುವವರಿಗೆ ಉಚಿತ ಊಟ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾನೆ, 

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಆಶ್ರಮದ ವೆಬ್‌ಸೈಟ್ ನಲ್ಲಿ, ಆತನು ಈಕ್ವೆಡಾರ್‌ನಿಂದ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿರುವುದಾಗಿ  ಹೇಳಿಕೊಂಡಿದ್ದ.

SCROLL FOR NEXT