ದೇಶ

ಮುಂದಿನ 2 ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಟೋಲ್ ಪ್ಲಾಜಾ ಮುಕ್ತ: ಕೇಂದ್ರ ಸಚಿವ ನಿತಿನ್ ಗಡ್ಕರಿ

Srinivasamurthy VN

ನವದೆಹಲಿ: ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೆ ಕಾದು ಸುಸ್ತಾಗುತ್ತಿದ್ದ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಗಳು ಟೋಲ್ ಪ್ಲಾಜಾದಿಂದ ಮುಕ್ತವಾಗಲಿದೆ.

ಹೌದು.. ಈ ಬಗ್ಗೆ ಸ್ವತಃ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದು, ಹೆದ್ದಾರಿಗಳಲ್ಲಿ ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಅಸೋಚಾಮ್ ಸಂಸ್ಥಾಪನಾ ವಾರ’ ಆಚರಣೆಯ ಕಾರ್ಯಕ್ರಮದ ನಿಮಿತ್ತ ಮಾತನಾಡಿದ ನಿತಿನ್ ಗಡ್ಕರಿ ಅವರು, 'ಹೊಸ ಟೋಲ್ ಸಂಗ್ರಹ ವ್ಯವಸ್ಥೆಯ ರೂಪುರೇಷೆ ಅಂತಿಮಗೊಳಿಸಲಾಗಿದೆ. ರಷ್ಯಾ ಸರ್ಕಾರದ ಸಹಯೋಗದೊಂದಿಗೆ ಅದನ್ನು ಜಾರಿಗೊಳಿಸಲಾಗುವು. ಹೊಸ ಟೋಲ್  ಸಂಗ್ರಹ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗಲಿದೆ ಎಂದು ಹೇಳಿದರು.

ಇತ್ತೀಚಿನ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.  ರಷ್ಯಾ ಸರ್ಕಾರದ ಸಹಾಯದೊಂದಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ  ಜಾರಿಗೊಳಿಸುವ ಬಗ್ಗೆ ವಿಸ್ತೃತ ಪರೀಕ್ಷೆ ನಡೆಸಲಾಗಿದ್ದು, ಯೋಜನೆ ಅಂತಿಮಗೊಳಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತವು ಟೋಲ್ ಬೂತ್ ರಹಿತ ಹೆದ್ದಾರಿಗಳನ್ನು ಹೊಂದಲಿದೆ. ಜಿಪಿಎಸ್ ವ್ಯವಸ್ಥೆ ಮೂಲಕ ವಾಹನಗಳನ್ನು ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ  ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಸಂದಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಟೋಲ್ ಸಂಗ್ರಹ ಕಳೆದ ವರ್ಷ 70 ಕೋಟಿ ರೂಗಳಷ್ಟಿತ್ತು. ಅದೇ ಈ ವರ್ಷ 92 ಕೋಟಿ ರೂಗಳಿಗೆ ಏರಿಕೆಯಾಗಿದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾರ್ಚ್ 2021 ರ ವೇಳೆಗೆ 34,000 ಕೋಟಿ ರೂ.ಗಳು ಮತ್ತು ಐದು  ವರ್ಷಗಳಲ್ಲಿ 1.34 ಲಕ್ಷ ಕೋಟಿ ರೂ ಆದಾಯ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಗಡ್ಕರಿ ಹೇಳಿದರು.

ಅಂತೆಯೇ ತಂತ್ರಜ್ಞಾನದ ಬಳಕೆಯಿಂದ ಲೆವಿ ಸಂಗ್ರಹದಲ್ಲಿ ಸೋರಿಕೆಯಾಗುವುದಿಲ್ಲ ಮತ್ತು ಹಣ ವರ್ಗಾವಣೆಯು ಪಾರದರ್ಶಕ ರೀತಿಯಲ್ಲಿರುತ್ತದೆ. ಪ್ಲಾಜಾಗಳಲ್ಲಿ ತಡೆರಹಿತ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು, ಸರ್ಕಾರವು ಆರ್ಎಫ್ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್)  ಟ್ಯಾಗ್‌ಗಳನ್ನು ಪರಿಚಯಿಸಿದೆ ಎಂದು ಹೇಳಿದರು.

SCROLL FOR NEXT