ದೇಶ

ಮುಕುಲ್ ರಾಯ್- ಸುವೇಂದು ಅಧಿಕಾರಿ ಕುರಿತ ಯೂಟ್ಯೂಬರ್ ಧ್ರುವ್ ರಾಥೀ ಟ್ವೀಟ್ ವೈರಲ್: ಕೆರಳಿ ಕೆಂಡವಾದ ಬಿಜೆಪಿ

Srinivas Rao BV

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವವರ ಶಾಸಕರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಯೂಟ್ಯೂಬರ್ ಧ್ರುವ್ ರಾಥೀ ಮಾಡಿರುವ ಟ್ವೀಟ್ ಈಗ ವೈರಲ್ ಆಗತೊಡಗಿದ್ದು ಬಿಜೆಪಿ ಕೆರಳಿ ಕೆಂಡವಾಗಿದೆ. 

ಈ ಹಿಂದೆ ಟಿಎಂಸಿ ನಾಯಕರಾಗಿದ್ದ ಸುವೇಂದು ಅಧಿಕಾರಿ ಹಾಗೂ ಮುಕುಲ್ ರಾಯ್ ಅವರ ವಿರುದ್ಧ ನಡೆದಿದ್ದ ರಹಸ್ಯ ಕಾರ್ಯಾಚರಣೆಯ ವಿಡಿಯೋವೊಂದನ್ನು ಬಿಜೆಪಿ ಯುಟ್ಯೂಬ್ ಚಾನಲ್ ಪ್ರಸಾರ ಮಾಡಿತ್ತು, ಅದರ ಸ್ಕ್ರೀನ್ ಶಾಟ್ ಗಳನ್ನು ಧ್ರುವ್ ರಾಥೀ ಟ್ವೀಟ್ ಮಾಡಿದ್ದಾರೆ. 

ನಾರದ ನ್ಯೂಸ್ ನ ಸಿಇಒ, ಪತ್ರಕರ್ತ ಮ್ಯಾಥ್ಯೂ ಸ್ಯಾಮುಯಲ್ಸ್ ಎಂಬಾತ 11 ಟಿಎಂಸಿ ನಾಯಕರಿಗೆ ಲಂಚದ ಆಮಿಷವೊಡ್ಡುತ್ತಿರುವ ವಿಡಿಯೋವನ್ನು 2016 ರಲ್ಲಿ ಬಿಜೆಪಿಯ ಯೂಟ್ಯೂಬ್ ಖಾತೆಯಲ್ಲಿ ಪ್ರಸಾರ ಮಾಡಲಾಗಿತ್ತು.
11 ಟಿಎಂಸಿ ನಾಯಕರ ಪೈಕಿ ಈಗ ಬಿಜೆಪಿ ಸೇರಿರುವ ಮುಕುಲ್ ರಾಯ್ ಹಾಗೂ ಸುವೇಂದು ಅಧಿಕಾರಿ ಸಹ ಇದ್ದರು. ಈ ಇಬ್ಬರೂ ನಾಯಕರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆಯನ್ನೂ ನಡೆಸಿತ್ತು.

"4 ವರ್ಷಗಳ ಹಿಂದೆ ಬಿಜೆಪಿ ಯಾರ ವಿರುದ್ಧ ಪ್ರತಿಭಟನೆ ನಡೆಸಿತ್ತೋ ಈಗ ಅದೇ ನಾಯಕರು ಸಂತೋಷದಿಂದ ಬಿಜೆಪಿ ಸೇರಿದ್ದಾರೆ" ಎಂದು ಧ್ರುವ್ ರಾಥೀ ಬರೆದಿದ್ದಾರೆ. ಟ್ವಿಟರ್ ನಲ್ಲಿ ಈ ಟ್ವೀಟ್ ವೈರಲ್ ಆಗತೊಡಗಿದ್ದು, ಕೆಲವೇ ನಿಮಿಷಗಳಲ್ಲಿ 7,500 ರಿಟ್ವೀಟ್ ಗಳು ಹಾಗೂ 31,000 ಕ್ಕೂ ಅಧಿಕ ಲೈಕ್ ಗಳನ್ನು ಪಡೆದಿವೆ.

SCROLL FOR NEXT