ದೇಶ

ಡಿಡಿಸಿ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಸದ್ಯಕ್ಕೆ ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸುವುದಿಲ್ಲ: ಒಮರ್ ಅಬ್ದುಲ್ಲಾ

Lingaraj Badiger

ಶ್ರೀನಗರ: ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್(ಪಿಎಜಿಡಿ) ಘೋಷಣೆ ಮಾಡಿದ ನಂತರ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯನ್ನು ಸದ್ಯಕ್ಕೆ ನಡೆಸುವುದಿಲ್ಲ ಎಂದು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಎನ್ ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಬುಧವಾರ ಹೇಳಿದ್ದಾರೆ.

288 ಸ್ಥಾನಗಳಿಗೆ ನಡೆದ ಡಿಡಿಸಿ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿರುವಂತೆ ಪಿಎಜಿಡಿ 112 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಮತ್ತು ಕಾಂಗ್ರೆಸ್ 24 ಹಾಗೂ 49 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 

ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ, ಹೊಸದಾಗಿ ರಚಿಸಲಾದ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ತಕ್ಷಣ ಚುನಾವಣೆ ಘೋಷಿಸಬೇಕು ಎಂದು ಹೇಳಿದ್ದಾರೆ.

"ಆದರೆ ಡಿಡಿಸಿ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಶೀಘ್ರದಲ್ಲೇ ಇಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಅವರು ಪ್ರಜಾಪ್ರಭುತ್ವವನ್ನು ನಂಬಿದ್ದರೆ ಅವರು ಈಗಲೇ ಚುನಾವಣೆಯನ್ನು ಘೋಷಿಸಬಹುದಿತ್ತು" ಎಂದಿದ್ದಾರೆ.

ಗುಪ್ಕರ್ ಮೈತ್ರಿಕೂಟವು ಇನ್ನೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ ಮತ್ತು ಪಿಎಜಿಡಿಯ ಕಾರ್ಯಚಟುವಟಿಕೆಯಲ್ಲಿ ಕೆಲವು ದೌರ್ಬಲ್ಯಗಳಿವೆ ಎಂದು ಮಾಜಿ ಸಿಎಂ ಒಪ್ಪಿಕೊಂಡಿದ್ದಾರೆ.

SCROLL FOR NEXT