ದೇಶ

ಕೇರಳದ ಅತ್ಯಂತ ಕಿರಿಯ ಮೇಯರ್ ಆಗಲಿದ್ದಾರೆ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್

Lingaraj Badiger

ತಿರುವನಂತಪುರಂ: 21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಅವರು ತಿರುವನಂತಪುರಂನ ಮುಂದಿನ ಮೇಯರ್ ಆಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಮೂಲಕ ಆರ್ಯ ಅವರು ರಾಜ್ಯದ ಅತ್ಯಂತ ಕಿರಿಯ ಮೇಯರ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಸಿಪಿಎಂ ಅಭ್ಯರ್ಥಿ ಆರ್ಯ, ಮುದವನ್ಮುಗಲ್ ವಾರ್ಡ್‌ನಿಂದ ಯುಡಿಎಫ್ ಅಭ್ಯರ್ಥಿ ಶ್ರೀಕಾಲ ಅವರ ವಿರುದ್ಧ 2872 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಜಿಲ್ಲೆಯ ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದಾರೆ.

ಆರ್ಯ ಅವರು ತಿರುವನಂತಪುರಂನಲ್ಲಿರುವ ಆಲ್ ಸೇಂಟ್ಸ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ಬಾಲಾ ಸಂಘದ ರಾಜ್ಯಾಧ್ಯಕ್ಷೆ ಮತ್ತು ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐನ ರಾಜ್ಯ ಪದಾಧಿಕಾರಿಯಾಗಿದ್ದಾರೆ. ಅಲ್ಲದೆ ಸಿಪಿಎಂ ಶಾಖಾ ಸಮಿತಿ ಸದಸ್ಯೆಯೂ ಆಗಿದ್ದಾರೆ.

ಆರ್ಯ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿಲ್ಲ. ಅವರ ತಂದೆ ರಾಜೇಂದ್ರನ್ ಅವರು  ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಶ್ರೀಲತಾ ಅವರು ಎಲ್ಐಸಿ ಏಜೆಂಟ್ ಆಗಿದ್ದಾರೆ.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಇಂದು ಆರ್ಯ ಅವರನ್ನು ಭೇಟಿ ಮಾಡಿದ್ದು, ಮೇಯರ್ ಹುದ್ದೆಗೆ ಯುವಕರನ್ನು ಪರಿಗಣಿಸಲು ನಿರ್ಧರಿಸಿದ್ದರಿಂದ ಪಕ್ಷ ಬಿಎಸ್ಸಿ ವಿದ್ಯಾರ್ಥಿನಿಯ ಹೆಸರನ್ನು ಅಂತಿಮಗೊಳಿಸಿದೆ ಎನ್ನಲಾಗಿದೆ.

ಮೇಯರ್ ಹುದ್ದೆಗೆ ಸಂಬಂಧಿಸಿದಂತೆ ಪಕ್ಷದಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಪಕ್ಷ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಆರ್ಯ ಹೇಳಿದ್ದಾರೆ.

ನಾನು ಈಗ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಮುಂದೆ ಪಕ್ಷ ನನಗೆ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

SCROLL FOR NEXT