ದೇಶ

ಆಕ್ಸ್‌ಫರ್ಡ್ ನ ಕೋವಿಶೀಲ್ಡ್‌ ಲಸಿಕೆಗೆ ತುರ್ತು ಬಳಕೆ ಅನುಮತಿ ಸಾಧ್ಯತೆ: ವರದಿ

Srinivasamurthy VN

ನವದೆಹಲಿ: ಆಕ್ಸ್ ಫರ್ಡ್ ಸಂಸ್ಥೆಯ ಕೋವಿಶೀಲ್ಡ್‌ ಕೊರೋನಾ ವೈರಸ್ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆ ಅನುಮತಿ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜನವರಿಯಲ್ಲಿ ಕೋವಿಡ್-–19 ಲಸಿಕೆಯನ್ನು ವಿತರಿಸಲು ಪೂರ್ವಸಿದ್ಧತೆ ಆರಂಭವಾಗಿದ್ದು, ತುರ್ತು ಬಳಕೆಗಾಗಿ ಆಕ್ಸ್‌ಫರ್ಡ್‌ ಲಸಿಕೆಗೆ(ಕೋವಿಶೀಲ್ಡ್‌) ಮುಂದಿನ ವಾರ ಭಾರತೀಯ ಔಷಧ ನಿಯಂತ್ರಕರು (DCGI) ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಷ್ಟ್ರೀಯ  ಮಾಧ್ಯಮಗಳು ವರದಿ ಮಾಡಿದ್ದು, 'ಆಕ್ಸ್‌ಫರ್ಡ್‌ ಲಸಿಕೆಗೆ ಬ್ರಿಟನ್‌ನ ಔಷಧ ನಿಯಂತ್ರಕರು ಒಪ್ಪಿಗೆ ನೀಡಿದ ಬಳಿಕ, ಭಾರತದಲ್ಲಿರುವ ಕೋವಿಡ್‌-19 ತಜ್ಞರ ಸಮಿತಿಯು ಸಭೆ ನಡೆಸಲಿದೆ. ಭಾರತದಲ್ಲಿ ಹಾಗೂ ವಿದೇಶದಲ್ಲಿ ನಡೆದ ಲಸಿಕೆಯ ಪ್ರಯೋಗ, ಸುರಕ್ಷತೆ ಹಾಗೂ ಪರಿಣಾಮದ ಫಲಿತಾಂಶವನ್ನು  ಕೂಲಂಕುಷವಾಗಿ ಪರಿಶೀಲಿಸಿ, ಲಸಿಕೆಯ ತುರ್ತು ಬಳಕೆಗೆ ಅನುಮತಿಯ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೂಲಗಳ ಪ್ರಕಾರ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ನೀಡುವುದಕ್ಕೆ ಇನ್ನೂ ಕಾಲಾವಕಾಶ ಬೇಕಾಗಿದೆ. ಏಕೆಂದರೆ, ಲಸಿಕೆಯ ಮೂರನೇ ಹಂತದ ಪ್ರಯೋಗವು ಇನ್ನೂ ನಡೆಯುತ್ತಿದೆ. ಹೀಗಾಗಿ ಆಕ್ಸ್‌ಫರ್ಡ್‌ ಲಸಿಕೆ ‘ಕೋವಿಶೀಲ್ಡ್‌’  ಭಾರತದಲ್ಲಿ ಬಿಡುಗಡೆಯಾಗಲಿರುವ ಮೊದಲ ಕೋವಿಡ್‌ ಲಸಿಕೆಯಾಗಿರಲಿದೆ ಎಂದು ಹೇಳಲಾಗುತ್ತಿದೆ. 

ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಸೂಚಿಸಿದ್ದ ಹೆಚ್ಚುವರಿ ದತ್ತಾಂಶಗಳನ್ನು, ಕೋವಿಶೀಲ್ಡ್‌ ಲಸಿಕೆ ತಯಾರಿಸುತ್ತಿರುವ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ(ಎಸ್ಐಐ) ಕಳೆದ ವಾರ ನೀಡಿದೆ. ಅಲ್ಲದೆ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿ ಭಾರತ್‌ ಬಯೋಟೆಕ್‌, ಸೆರಂ ಇನ್‌ಸ್ಟಿಟ್ಯೂಟ್‌  ಹಾಗೂ ಫೈಝರ್‌ ಕಂಪನಿಯು ತಿಂಗಳ ಆರಂಭದಲ್ಲಿ ಡಿಸಿಜಿಐಗೆ ಅರ್ಜಿ ಸಲ್ಲಿಸಿವೆ. 

ಇನ್ನು ಈಗಾಗಲೇ ಫಿಝರ್‌ ಲಸಿಕೆ ಬಳಕೆಗೆ ಬ್ರಿಟನ್‌, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅನುಮತಿ ನೀಡಿವೆ. 

SCROLL FOR NEXT