ದೇಶ

ತಿರುವನಂತಪುರಂ ಅನ್ನು ಮಾದರಿ ನಗರವನ್ನಾಗಿ ಮಾಡುತ್ತೇನೆ: ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್

Lingaraj Badiger

ತಿರುವನಂತಪುರಂ: 21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಅವರು ತಿರುವನಂತಪುರಂನ ನೂತನ ಮೇಯರ್ ಆಗಿ ಸೋಮವಾರ ಆಯ್ಕೆಯಾಗಿದ್ದಾರೆ. ಈ ಮೂಲಕ ಆರ್ಯ ಅವರು ರಾಜ್ಯದ ಅತ್ಯಂತ ಕಿರಿಯ ಮೇಯರ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ಮುದವನ್ಮುಗಲ್ ವಾರ್ಡ್‌ನ ಎಲ್ ಡಿಎಫ್ ಕೌನ್ಸಿಲರ್ ಆರ್ಯ ಅವರು ಇಂದು ನಡೆದ ಮೇಯರ್ ಚುನಾವಣೆಯಲ್ಲಿ 54 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ಮೇಯರ್ ಆಗಿ ಆಯ್ಕೆಯಾದ ನಂತರ ಮಾತನಾಡಿದ ಆರ್ಯ ಅವರು, ತಿರುವನಂತಪುರಂ ಅನ್ನು ಮಾದರಿ ನಗರವನ್ನಾಗಿ ಮಾಡಲು ಶ್ರಮಿಸುತ್ತೇನೆ. ಪಾಲಿಕೆ ಎಲ್ಲರ ಸಹಕಾರದೊಂದಿಗೆ ವಿವಿಧ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುತ್ತದೆ ಮತ್ತು ನಗರಕ್ಕಾಗಿ ನಾವು ಒಟ್ಟಾಗಿ ಯೋಜನೆಗಳನ್ನು ಕಾರ್ಯಗತಗೊಳಿಸುತ್ತೇವೆ ಎಂದು ಹೇಳಿದರು ಮತ್ತು ಎಲ್ಲರ ಸಹಕಾರವನ್ನು ಕೋರಿದರು.

ಆರ್ಯ ಅವರು ತಿರುವನಂತಪುರಂನಲ್ಲಿರುವ ಆಲ್ ಸೇಂಟ್ಸ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ಬಾಲಾ ಸಂಘದ ರಾಜ್ಯಾಧ್ಯಕ್ಷೆ ಮತ್ತು ಸಿಪಿಎಂನ ವಿದ್ಯಾರ್ಥಿ ವಿಭಾಗವಾದ ಎಸ್‌ಎಫ್‌ಐನ ರಾಜ್ಯ ಪದಾಧಿಕಾರಿಯಾಗಿದ್ದಾರೆ. ಅಲ್ಲದೆ ಸಿಪಿಎಂ ಶಾಖಾ ಸಮಿತಿ ಸದಸ್ಯೆಯೂ ಆಗಿದ್ದಾರೆ.

ಆರ್ಯ ಅವರು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿಲ್ಲ. ಅವರ ತಂದೆ ರಾಜೇಂದ್ರನ್ ಅವರು  ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಶ್ರೀಲತಾ ಅವರು ಎಲ್ಐಸಿ ಏಜೆಂಟ್ ಆಗಿದ್ದಾರೆ.

SCROLL FOR NEXT