ದೇಶ

ದೇಶದ್ರೋಹ ಪ್ರಕರಣ: ಶಾರ್ಜೀಲ್ ಇಮಾಮ್ ಪೊಲೀಸ್ ಕಸ್ಟಡಿ ಮೂರು ದಿನ ವಿಸ್ತರಣೆ

Nagaraja AB

ನವದೆಹಲಿ: ದೇಹದ್ರೋಹ ಪ್ರಕರಣದಲ್ಲಿ ಆರೋಪಿಯಾಗಿರುವ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ  ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಮೂರು ದಿನಗಳವರೆಗೆ ವಿಸ್ತರಿಸಿ ಇಲ್ಲಿನ ನ್ಯಾಯಾಲಯವೊಂದು ಇಂದು ತೀರ್ಪು ನೀಡಿದೆ.

ಇಮಾಮ್ ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಾಯಗೊಂಡಿದ್ದರಿಂದ ಬಿಗಿ ಭದ್ರತೆ ನಡುವೆ ಪಾಟಿಯಾಲ ಹೌಸ್ ಕೋರ್ಟ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪುರುಷೋತ್ತಮ್ ಪಠಾಕ್ ಅವರ ನಿವಾಸದಲ್ಲಿ ಇಂದು ಹಾಜರುಪಡಿಸಲಾಯಿತು.

ವಾಟ್ಸಾಪ್ ಗುಂಪುಗಳೊಂದಿಗೆ ಶಾರ್ಜಿಲ್ ಹೊಂದಿರುವ ನಂಟಿನ ತನಿಖೆಗಾಗಿ ಹೆಚ್ಚುವರಿವಾಗಿ ಮೂರು ದಿನಗಳ ಕಸ್ಟಡಿ ವಿಸ್ತರಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದರು. ಪೊಲೀಸರ ಬೇಡಿಕೆಯನ್ನು ನ್ಯಾಯಾಲಯ ಒಪ್ಪಿತು.

ಪೌರತ್ವ ತಿದ್ದುಪಡಿ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಪ್ರಚೋದನಾಕಾರಿ ಹಾಗೂ ದೇಶದ್ರೋಹ ಹೇಳಿಕೆ ಆರೋಪದ ಮೇರೆಗೆ ಜನವರಿ 28 ರಂದು ಬಿಹಾರದ ಜಿಹಾನಬಾದ್ ಜಿಲ್ಲೆಯ ಕಾಕೊ ಬಳಿ ಇಮಾಮ್ ಅವರನ್ನು ಬಂಧಿಸಲಾಗಿತ್ತು. ನಂತರ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. 

ಶಾರ್ಜೀಲ್  ಇಮಾಮ್  ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಜನವರಿ 26 ರಂದು ಗೆಹಲಿ ಅಪರಾಧ ವಿಭಾಗದ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ನಂತರ ತಲೆಮರೆಸಿಕೊಂಡಿದ್ದ ಇಮಾಮ್ ಅವರನ್ನು ಶೋಧ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು. 

ಅರುಣಾಚಲ ಪ್ರದೇಶ, ಅಸ್ಸಾಂ, ಉತ್ತರ ಪ್ರದೇಶದಲ್ಲೂ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಸ್ಸಾಂನಲ್ಲಿ ಮುಸ್ಲಿಂರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ನಾವೆಲ್ಲರು ಅರಿತಿದ್ದೇವೆ. ಎನ್ ಆರ್ ಸಿಯಿಂದ ಜನರನ್ನು ರಕ್ಷಿಸಬೇಕಾಗಿದೆ. ಈಶಾನ್ಯ ಭಾಗವನ್ನು ದೇಶದಿಂದ ವಿಭಜಿಸುವುದೇ ಇದಕ್ಕೆ ಇರುವ ಸರಿಯಾದ ಮಾರ್ಗ ಎಂದು ಅವರು ಹೇಳಿಕೆ  ನೀಡಿದ್ದರು.

SCROLL FOR NEXT