ದೇಶ

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಜಾರಿ: ಬುಧವಾರ ಕಾದಿಟ್ಟ ತೀರ್ಪು ಪ್ರಕಟ

Nagaraja AB

ನವದೆಹಲಿ: ನಿರ್ಭಯಾ ಅತ್ಯಾಚಾರ,  ಹತ್ಯೆ ಪ್ರಕರಣದ ನಾಲ್ವರು ಆಪರಾಧಿಗಳಿಗೆ  ವಿಧಿಸಲಾಗಿರುವ ಗಲ್ಲು ಶಿಕ್ಷೆ ಜಾರಿಗೆ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸಲ್ಲಿಸಿರುವ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಬುಧವಾರ ಕಾಯ್ದಿಟ್ಟ ತೀರ್ಪು  ಪ್ರಕಟಿಸಲಿದೆ

ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ಕುರಿತು ಶನಿವಾರ ಮತ್ತು ಭಾನುವಾರ ವಿಶೇಷ ವಿಚಾರಣೆ ನಡೆಸಿದ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟ್ ಫೆಬ್ರವರಿ 2 ರಂದು ತೀರ್ಪು ಕಾಯ್ದಿರಿಸಿದ್ದರು. 

ತಿಹಾರ್ ಜೈಲಿನಲ್ಲಿರುವ ಮುಕೇಶ್  ಕುಮಾರ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಕುಮಾರ್ ಅವರನ್ನು ಫೆಬ್ರವರಿ 1 ರಂದು ಗಲ್ಲಿಗೇರಿಸಲು ಹೊರಡಿಸಲಾಗಿದ್ದ ಡೆತ್ ವಾರೆಂಟ್ ಗೆ ದೆಹಲಿ ನ್ಯಾಯಾಲಯ  ಜ.31 ರಂದು ತಾತ್ಕಾಲಿಕ ತಡೆ ನೀಡಿದ್ದನ್ನು ಕೇಂದ್ರ ಸರ್ಕಾರ ಹೈಕೋರ್ಟ್ ನಲ್ಲಿ ಪ್ರಶ್ನಿಸಿತು. 

ಈ ಪ್ರಕರಣದಲ್ಲಿ ಅಪರಾಧಿಯೊಬ್ಬನ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳ ವಿಚಾರಣೆ ಮುಂದೆ ಬಾಕಿ ಇರುವಾಗ ನಾಲ್ವರನ್ನೂ ಒಟ್ಟಿಗೆ ನೇಣಿಗೇರಿಸಲು ಸಾಧ್ಯವಿಲ್ಲ ಎಂಬ ನಿಯಮಗಳ ಅನುಸಾರ ಪಟಿಯಾಲ ಹೌಸ್ ಕೋರ್ಟ್ ಗಲ್ಲಿಗೇರಿಸಲು ತಾತ್ಕಾಲಿಕ ತಡೆ ನೀಡಿತ್ತು.

ಅಪರಾಧಿಗಳು ನೇಣು ಜಾರಿ ವಿಳಂಬಗೊಳಿಸಲು ತಂತ್ರ ನಡೆಸುತ್ತಿದ್ದಾರೆಂದು ಹೇಳಿ ಕೇಂದ್ರ ತಡೆಯಾಜ್ಞೆ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಮಂಗಳವಾರ ನಿರ್ಭಯಾ ಪೋಷಕರ ಪರ ವಕೀಲರು ಕೇಂದ್ರದ ಅರ್ಜಿ ಸಂಬಂಧ ತ್ವರಿತಗತಿಯಲ್ಲಿ ತೀರ್ಪು ಪ್ರಕಟಿಸಬೇಕೆಂದು ಕೋರ್ಟ್‌ನಲ್ಲಿ ಆಗ್ರಹಿಸಿದ್ದರು.

SCROLL FOR NEXT