ದೇಶ

ವಾರದಲ್ಲಿ ಎರಡನೇ ಬಾರಿ, ಬಿಜೆಪಿ ಸಂಸದ ಪರ್ವೇಶ್ ವರ್ಮಾ 24 ಗಂಟೆ ಪ್ರಚಾರ ಮಾಡದಂತೆ  ಆಯೋಗ ನಿರ್ಬಂಧ

Nagaraja AB

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಯೋತ್ಪಾದಕ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ 24 ಗಂಟೆ ಚುನಾವಣಾ ಪ್ರಚಾರ ಮಾಡದಂತೆ ಆಯೋಗ ನಿರ್ಬಂಧ ವಿಧಿಸಿದೆ. 

ಈ ವಾರದಲ್ಲಿ ವರ್ಮಾ ಎರಡನೇ ಬಾರಿ ಆಯೋಗದಿಂದ ನಿರ್ಬಂಧಕ್ಕೊಳಗಾಗಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಈ ನಿರ್ಬಂಧ ಜಾರಿಯಾಗಿದೆ. ಇದರಿಂದಾಗಿ ವರ್ಮಾ ಫೆಬ್ರವರಿ 8 ರವರೆಗೂ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಆದರೆ, ಗುರುವಾರ ಸಂಜೆಯೇ  ಪ್ರಚಾರ ಅಂತ್ಯಗೊಳ್ಳಲಿದೆ

ಇದಕ್ಕೂ ಮುನ್ನ ಶಾಹೀನ್ ಬಾಗ್ ನಲ್ಲಿ ಗುಂಡಿನ ದಾಳಿ ನಡೆಸಿದ  ಕಪಿಲ್ ಗುಜ್ಜಾರ್ ಗೆ ಎಎಪಿಯೊಂದಿಗೆ ನಂಟಿದೆ ಎಂದು ಆರೋಪಿಸಿ ವರ್ಮಾ ಸಂಸತ್ತಿನ ಗಾಂಧಿ ಪ್ರತಿಭೆ ಬಳಿ ಪ್ರತಿಭಟನೆ ನಡೆಸಿದರು. 

ಗುಜ್ಜಾರ್ ಹಾಗೂ ಆತನ ತಂದೆ ಎಎಪಿ ಮುಖಂಡರೊಂದಿಗೆ ಪೋಟೋ ತೆಗೆಸಿಕೊಂಡಿರುವುದನ್ನು ಆತನ ಮೊಬೈಲ್ ನಿಂದ ದೆಹಲಿ ಪೊಲೀಸರು ವಶಪಡಿಸಿಕೊಂಡ ಮಾರನೇ ದಿನವೇ ವರ್ಮಾ ಪ್ರತಿಭಟನೆ ನಡೆಸಿದ್ದಾರೆ. 

ಶಾಹೀನ್ ಬಾಗ್ ನಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ದೆಹಲಿ ಜನರು ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ನಿಮ್ಮ ಮನೆಗೆ ನುಗ್ಗಿ ಸಹೋದರಿಯರು,  ಹೆಣ್ಣು ಮಕ್ಕಳನ್ನು ಕೊಲ್ಲುತ್ತಾರೆ. ಅಂತಹ ಪರಿಸ್ಥಿತಿ ಈಗ ಇದೆ. ನಾಳೆ ನಿಮ್ಮನ್ನು ಕಾಪಾಡಲು ಮೋದಿ, ಅಮಿತ್ ಶಾ ಬರಲ್ಲ ಎಂದು ಪಶ್ಚಿಮ ದೆಹಲಿ ಸಂಸದ ಆಗಿರುವ ಪರ್ವೇಶ್ ವರ್ಮಾ ಹೇಳಿಕೆ ನೀಡಿದ್ದರು. 

SCROLL FOR NEXT