ದೇಶ

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯಲ್ಲಿ 15 ಮಂದಿ ಟ್ರಸ್ಟಿಗಳಿರಲಿದ್ದು, ಓರ್ವ ದಲಿತರಿಗೆ ಅವಕಾಶ ಕಲ್ಪಿಸಲಾಗಿದೆ: ಅಮಿತ್ ಶಾ

Manjula VN

ನವದೆಹಲಿ: ಕೇಂದ್ರ ಸರ್ಕಾರ ರಚಿಸಲಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿಯಲ್ಲಿ 15 ಮಂದಿ ಟ್ರಸ್ಟಿಗಳಿರಲಿದ್ದು, ಓರ್ವ ದಲಿತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ನೀಡಿದ್ದಾರೆ. 

ಲೋಕಸಭೆಯಲ್ಲಿ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ಮೋದಿಯವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಯೋಜನೆಯೊಂದನ್ನು ಹಮ್ಮಿಕೊಳ್ಳಲಾಗಿದ್ದು, ಮಂದಿರ ನಿರ್ಮಾಣಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಹೆಸರಿನ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಟ್ರಸ್ಟ್ ರಚನೆ ಕುರಿತು ಕೇಂದ್ರ ಸಂಪುಟ ನಿರ್ಧಾರ ಕೈಗೊಂಡಿದೆ. ಸಮಿತಿ ರಚನೆಗೊಂಡ ಬಳಿಕ ಭೂಮಿಯನ್ನು ಟ್ರಸ್ಟ್'ಗೆ ನೀಡಲಾಗುತ್ತದೆ ಎಂದು ಹೇಳಿದ್ದರು, 

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ಅವರು, ಸಮಿತಿಯಲ್ಲಿ ಒಟ್ಟು 15 ಮಂದಿ ಟ್ರಸ್ಟಿಗಳಿರಲಿದ್ದು, 15 ಮಂದಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರಿಗೆ ಸ್ಥಾನ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಅಲ್ಲದೆ, ಇದೇ ವೇಳೆ ಸಮಿತಿ ರಚನೆ ಕುರಿತು ಮಹತ್ವದ ನಿರ್ಣಯ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಲ್ಲಿಸಿ, ಸಮಿತಿಯು ಸಾಮಾಜಿಕ ಸೌಹಾರ್ದತೆಯ ಬಲವನ್ನು ಹೆಚ್ಚಿಸಲಿದೆ ಎಂದಿದ್ದಾರೆ. 

ಹಲವು ವರ್ಷಗಳ ಕೋಟ್ಯಾಂತರ ಜನರ ನಂಬಿಕೆ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಶೀಘ್ರದಲ್ಲಿಯೇ ಜನರು ರಾಮ ಜನ್ಮಭೂಮಿ ಸ್ಥಳದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸುವ ಅವಕಾಶ ದೊರಕಲಿದೆ ಎಂದು ಹೇಳಿದ್ದಾರೆ. 

SCROLL FOR NEXT