ದೇಶ

ದೆಹಲಿ ಚುನಾವಣೆ ನಂತರ ಶಾಹೀನ್ ಬಾಗ್ ಜಲಿಯನ್ ವಾಲಾಬಾಗ್ ಆಗಿ ಬದಲಾಗುವ ಸಾಧ್ಯತೆ- ಓವೈಸಿ

Nagaraja AB

ಹೈದ್ರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ 50 ದಿನಗಳಿಂದಲೂ ನಡೆಯುತ್ತಿರುವ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಪೊಲೀಸರ ಬಲದೊಂದಿಗೆ ತೆರವುಗೊಳಿಸುವ  ಸಾಧ್ಯತೆ  ಇದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಳವಳ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಕೇಂದ್ರ ಸರ್ಕಾರ ಈ ರೀತಿಯ ಕೃತ್ಯಕ್ಕೆ ಮುಂದಾದರೆ ಶಾಹೀನ್ ಬಾಗ್ ಜಲಿಯನ್ ವಾಲಾಬಾಗ್ ಆಗಿ ಬದಲಾಗುವ ಸಾಧ್ಯತೆ ಇದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರೆ ಶಾಹೀನ್ ಬಾಗ್ ಜಲಿಯನ್ ವಾಲಾಬಾಗ್ ಆಗಲಿದೆ. ಗುಂಡು ಹಾರಿಸುವಂತೆ ಬಿಜೆಪಿ ಸಚಿವರು ಹೇಳಿಕೆ ನೀಡುತ್ತಾರೆ. ಯಾರು ಪ್ರಚೋದಕರು ಎಂಬುದರ ಬಗ್ಗೆ ಸರ್ಕಾರ ಉತ್ತರ ನೀಡಬೇಕಾಗಿದೆ ಎಂದಿದ್ದಾರೆ.

ಫೆಬ್ರವರಿ 8 ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ ಬಳಿಕ ಪೊಲೀಸ್ ಬಲದೊಂದಿಗೆ ಕೇಂದ್ರ ಸರ್ಕಾರ ಶಾಹೀನ್ ಬಾಗ್ ಪ್ರತಿಭಟನೆ ತೆರವುಗೊಳಿಸುವ ಸಾಧ್ಯತೆ  ಇದೆ ಎಂಬಂತಹ ವರದಿಗಳ ಹಿನ್ನೆಲೆಯಲ್ಲಿ ಓವೈಸಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಎನ್ ಪಿಆರ್ ಹಾಗೂ ಎನ್ ಆರ್ ಸಿ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, 2024ರವರೆಗೂ ಎನ್ ಆರ್ ಸಿ ಅನುಷ್ಠಾನವಾಗುವುದಿಲ್ಲ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಎನ್ ಪಿಆರ್ ಗಾಗಿ ಸರ್ಕಾರ ಏಕೆ 3900 ಕೋಟಿ ವೆಚ್ಚ ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಹಿಟ್ಲರ್ ತನ್ನ ಆಡಳಿತವಧಿಯಲ್ಲಿ ಎರಡು ಬಾರಿ ಜನಗಣತಿ ನಡೆಸಿದ್ದ ನಂತರ ಯಹೊದಿಗಳನ್ನು ಅನಿಲ ಕೋಣೆಗೆ ತಳ್ಳಿ ಸಾಯಿಸಿದ. ಇದೇ ರೀತಿಯಲ್ಲಿ ನಮ್ಮ ದೇಶದಲ್ಲಿ ಆಗಬಾರದು ಎಂದರು.

ನವದೆಹಲಿಯ ಶಾಹೀನ್ ಬಾಗ್, ಖುರೇಜಿ ಖಾಸ್, ಹೌಜ್ ರಾಣಿ ಮೊದಲಾದ ಕಡೆಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ವಿರೋಧಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಡಿಸೆಂಬರ್ 15ರಿಂದಲೂ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

SCROLL FOR NEXT