ದೇಶ

ಶಾಹೀನ್ ಬಾಗ್ ನಲ್ಲಿ ಆತ್ಮಾಹುತಿ ದಾಳಿಕೋರರನ್ನು ಬೆಳೆಸಲಾಗುತ್ತಿದೆ: ಕೇಂದ್ರ ಸಚಿವ ಗಿರಿರಾಜ್ ಸಿಂಗ್

Manjula VN

ನವದೆಹಲಿ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮೂಲಕ ಶಾಹೀನ್ ಬಾಗ್ ಆತ್ಮಾಹುತಿ ದಾಳಿಕೋರರನ್ನು ಹುಟ್ಟುಹಾಕುತ್ತಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ. 

ಶಾಹೀನ್ ಬಾಗ್ ಪ್ರತಿಭಟನೆ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಶಪ್ರತಿಭಟನೆಯನ್ನು ಶಾಹೀನ್ ಬಾಗ್ ಚಳುವಳಿ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಆತ್ಮಾಹುತಿ ಬಾಂಬರ್ ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಸಿಎಎ ವಿರುದ್ಧ ನಿರಂತರ ಪ್ರತಿಭಟನೆಗೆ ವೇದಿಕೆಯಾಗುವ ಮೂಲಕ ದೆಹಲಿಯ ಶಾಹೀನ್ ಬಾಗ್ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಲ್ಲಿನ ಪ್ರತಿಭಟನೆಗಳು ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ. 

ಶಾಹೀನ್ ಬಾಗ್ ನಲ್ಲಿ ದೇಶದ ವಿರುದ್ಧ ದೊಡ್ಡ ಸಂಚನ್ನು ರೂಪಿಸಲಾಗುತ್ತಿದೆ. ಆತ್ಮಾಹುತಿ ದಾಳಿಕೋರರನ್ನು ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಬಳಿಕ ಮತ್ತೊಂದು ಟ್ವೀಟ್ ನಲ್ಲಿ ವಿವಿದೆಡೆ ಮುಸ್ಲಿಂ ಸಮುದಾಯದ ಎಳೆಯ ಮಕ್ಕಳು ಆಕ್ರೋಶಭರಿತಗೊಂಡು ಮಾತುಗಳನ್ನಾಡಿರುವ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿ, ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಖಿಲಾಫತ್ ಆಂದೋಲನಕ್ಕೆ ಹೋಲಿಸಿದ್ದಾರೆ. ಈ ಮಕ್ಕಳ ಮಾತುಗಳನ್ನು ಕೇಳಿಸಿಕೊಳ್ಳಿ. ಇವರ ಮನಸ್ಸಲ್ಲಿ ಎಷ್ಟರ ಮಟ್ಟಿಗೆ ತುಂಬಲಾಗಿದೆ. ಇದು ಖಿಲಾಫತ್ ಆಂದೋಲನವಲ್ಲದೇ ಮತ್ತಿನ್ನೇನು ಎಂದು ಟ್ವೀಟ್ ಮಾಡಿದ್ದಾರೆ. 

ಖಿಲಾಫತ್ ಆಂದೋಲನ ಎಂಬುದು ಮೊದಲ ವಿಶ್ವ ಮಹಾಯುದ್ಧದ ನಂತರ ಟರ್ಕಿಯ ಅಟ್ಟಮನ್ ಇಸ್ಲಾಮೀ ಖಾಲೀಫರನ್ನು ರಕ್ಷಿಸಲು ಭಾರತೀಯ ಮುಸ್ಲಿಮರು 1919ರಲ್ಲಿ ಪ್ರಾರಂಭಿಸಿದ ಆಂದೋಲನವಾಗಿದೆ. 5 ವರ್ಷಗಳ ಕಾಲ ನಡೆದ ಈ ಆಂದೋಲನದಲ್ಲಿ ಭಾರತೀಯ ಮುಸ್ಲಿಮರು ಬ್ರಿಟೀಷ್ ಆಡಳಿತದ ವಿರುದ್ಧ ತೀವ್ರತರದಲ್ಲಿ ಪ್ರತಿಭಟನೆ ನಡೆಸಿದ್ದರು. ಶೌಕತ್ ಅಲಿ, ಮೊಹಮ್ಮದ್ ಅಲಿ ಜೌಹಾರ್, ಹಕೀಮ್ ಅಜ್ಮಲ್ ಖಾನ್ ಮೊದಲಾದವರು ಈ ಆಂದೋಲನದ ನೇತೃತ್ವ ವಹಿಸಿದ್ದರು. 1924ರಲ್ಲಿ ಟರ್ಕಿ ದೇಶ ಖಾಲೀಫ್ ವ್ಯವಸ್ಥೆಯನ್ನೇ ಕಿತ್ತುಹಾಕಿ ಜಾತ್ಯಾತೀತ ಸಂವಿಧಾನ ರೂಪಿಸುವುದರೊಂದಿಗೆ 1924ರಲ್ಲಿ ಭಾರತದಲ್ಲಿ ಖಿಲಾಫತ್ ಆಂದೋಲನ ನಿಂತುಹೋಯಿತು. 

SCROLL FOR NEXT