ದೇಶ

ಆಪ್ ಗೆ ಹ್ಯಾಟ್ರಿಕ್ ಗೆಲುವು: ಕೇಜ್ರಿವಾಲ್ ಗೆ ಮೋದಿ, ದೇವೇಗೌಡ, ಜೆಪಿ ನಡ್ಡಾ, ಮಮತಾ ಬ್ಯಾನರ್ಜಿ ಅಭಿನಂದನೆ

Lingaraj Badiger

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಬಾರಿ ಅಭೂತಪೂರ್ವ ಗೆಲುವು ಸಾಧಿಸಿದ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ದೆಹಲಿಯ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಎಎಪಿಗೆ ಶುಭವಾಗಲಿ ಎಂದು ಪ್ರಧಾನಿ ಮೋದಿ 
ಟ್ವೀಟರ್ ಮೂಲಕ ಹಾರೈಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭಾಶಯ ಕೋರಿ ಪತ್ರ ಬರೆದಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ಮೂರನೇ ಭಾರಿ ಅಭೂತಪೂರ್ವ ಗೆಲುವು ದಾಖಲಿಸಿದ ನಿಮಗೆ ಅಭಿನಂದನೆ. ಈ ಗೆಲುವಿಗೆ ನೀವು ಅರ್ಹರಾಗಿದ್ದೀರಿ. ಈ ಗೆಲುವು ಭಾರತೀಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಇನ್ನು "ದ್ವೇಷದ ಮಾತು ಮತ್ತು ವಿಭಜಕ ರಾಜಕಾರಣದ ಮೂಲಕ ಜನರ ಭಾವನೆಗಳ ಮೇಲೆ ಆಟ ಆಡುವ ನಾಯಕರಿಗೆ ಇದೊಂದು ಮುನ್ಸೂಚನೆ, ಏಕೆಂದರೆ ನೀಡಿದ್ದ ಭರವಸೆಗಳನ್ನು ಈಡೇರಿಸುವವರಿಗೆ ಮಾತ್ರ ಜನರು ಬಹುಮಾನ ನೀಡುತ್ತಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, "ಅಭಿನಂದನೆಗಳು, ಅರವಿಂದ್ ಕೇಜ್ರಿವಾಲ್, ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಅನ್ನು ಮತ್ತೊಮ್ಮೆ ಭರ್ಜರಿ ಬಹುಮತ ಪಡೆದಿದೆ. ದ್ವೇಷದ ಮಾತು ಮತ್ತು ವಿಭಜಕ ರಾಜಕೀಯದ ಮೂಲಕ ಜನರ ನಂಬಿಕೆಯ ಮೇಲೆ ಆಟ ಆಡುವ ನಾಯಕರಿಗೆ ಇದೊಂದು ಎಚ್ಚರಿಕೆಯಾಗಿದೆ. ತಮ್ಮ ವಾಗ್ದಾನಗಳನ್ನು ಪೂರೈಸುವವರನ್ನು ಜನರು ಕೈ ಹಿಡಿಯುತ್ತಾರೆ ಎಂದು ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ , ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ  ಮೆಹಬೂಬಾ ಮುಫ್ತಿ ಕೂಡ ಕೇಜ್ರಿವಾಲ್ ಅವರನ್ನು ಅಭಿನಂದಿಸಿದ್ದಾರೆ.

SCROLL FOR NEXT