ದೇಶ

ಗೌರ್ನರ್ ಗೆ ಪೂಜಾ ಸಾಮಗ್ರಿ ಮಾರಲು ನಿರಾಕರಣೆ, ಗಂಟೆಗಟ್ಟಲೆ ಕಾಯುವಂತೆ ಮಾಡಿದ ವಾರಾಣಸಿ ವರ್ತಕರು! 

Srinivas Rao BV

ಲಖನೌ: ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಅವರು ವಾರಾಣಸಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಕಾಲ ಭೈರವ ದೇವಾಲಯದ ಎದುರು ಗಂಟೆಗಟ್ಟಲೆ ಪೂಜಾ ಸಾಮಗ್ರಿಗಳಿಗಾಗಿ ಕಾದು ನಿಲ್ಲಬೇಕಾದ ಸ್ಥಿತಿ ಎದುರಾಗಿತ್ತು. 

ದೇವಾಲಯದ ಬಳಿ ಇದ್ದ ವರ್ತಕರು ಯಾರೂ ಸಹ ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಅವರಿಗೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲು ನಿರಾಕರಿಸಿದ ಪರಿಣಾಮ ಈ ಘಟನೆ ನಡೆದಿದೆ. ಇದೇನಪ್ಪಾ, ಗೌರ್ನರ್ ಮೇಲೆ ಏಕೆ ವರ್ತಕರ ಮುನಿಸು ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ.

ಹಾಗಂತ ವರ್ತಕರ ಕೋಪ ಇದ್ದದ್ದು ಗೌರ್ನರ್ ಮೇಲೆ ಅಲ್ಲ. ತಮಗೆ ಬಾಕಿ ನೀಡಬೇಕಿದ್ದ ಹಣವನ್ನು ನೀಡದೇ ಇದ್ದ  ಜಿಲ್ಲಾಡಳಿತದ ಮೇಲಿನ ಕೋಪವನ್ನು ಗೌರ್ನರ್ ನ ಕಾಯಿಸುವ ಮೂಲಕ ಹೊರ ಹಾಕಿದ್ದಾರೆ. 

ವರ್ತಕರ ವರ್ತನೆಗೆ ವಾರಾಣಸಿ ಜಿಲ್ಲಾಡಳಿತ ಕುಪಿತಗೊಂಡಿದೆ. ಜಿಲ್ಲಾಡಳಿತ ಈ ಹಿಂದಿನ ಬಾಕಿಯನ್ನು ಪಾವತಿ ಮಾಡುವವರೆಗೂ ತಾವು ಗೌರ್ನರ್ ಗೆ ಪೂಜಾ ಸಾಮಗ್ರಿ ಮಾರಾಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. 

ಪರಿಪರಿಯಾಗಿ ಭರವಸೆಗಳನ್ನು ನೀಡಿದರೂ ಸಹ ಅಂಗಡಿ ಮಾಲಿಕರು ಬಗ್ಗಲಿಲ್ಲ. ಪರಿಣಾಮ ಗೌರ್ನರ್ ಪೂಜೆಗಾಗಿ ದೇವಾಲಯದ ಒಳಗೆ ಕಾಯುವಂತಾಯಿತು. ವಿವಿಐಪಿಗಳು ದೇವಾಲಯಕ್ಕೆ ಭೇಟಿ ನೀಡಿದಾಗ ಪೂಜಾಸಾಮಗ್ರಿಗಳು ಪ್ರಸಾದಕ್ಕೆ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಜಿಲ್ಲಾಡಳಿತದ್ದೇ ಆಗಿರುತ್ತದೆ. 

ಕಳೆದ ವಾರ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಹಾಗೂ ಅವರ ತಂಡ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿತ್ತು. ಆಗಲೂ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿತ್ತು. ಸುಮಾರು 30 ಜನಕ್ಕೆ ಆಗುವಷ್ಟು ಪೂಜಾ ಸಾಮಗ್ರಿಗಳನ್ನು ಜಿಲ್ಲಾಡಳಿತ ಖರೀದಿಸಿತ್ತು. ಆದರೆ ಒಂದೇ ಒಂದು ರೂಪಾಯಿಯನ್ನೂ ನೀಡಿರಲಿಲ್ಲ. 

SCROLL FOR NEXT