ದೇಶ

ಪುಲ್ವಾಮಾ ದಾಳಿಗೆ ಒಂದು ವರ್ಷ: ಅಂದು ಏನು ನಡೆಯಿತು? ಭಾರತ ಹೇಗೆ ಪ್ರತಿಕ್ರಿಯಿಸಿತು? 

Sumana Upadhyaya

ನವದೆಹಲಿ: ಸರಿಯಾಗಿ ವರ್ಷದ ಹಿಂದೆ, ಫೆಬ್ರವರಿ 14ರ ಅಪರಾಹ್ನ 3 ಗಂಟೆ ಸಮಯ. ಜೈಶ್ ಇ ಮೊಹಮ್ಮದ್(ಜೆಇಎಂ) ಸಂಘಟನೆಯ ಉಗ್ರಗಾಮಿಗಳನ್ನು ಮತ್ತು ಸ್ಫೋಟಕಗಳನ್ನು ಹೊತ್ತ ವಾಹನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು.


ಇದು ನಡೆದಿದ್ದು ಜಮ್ಮುವಿನ ಪುಲ್ವಾಮಾ ಜಿಲ್ಲೆಯಲ್ಲಿ. ಜೈಶ್ ಇ ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರ ಯೋಧರ ಬೆಂಗಾವಲು ವಾಹನದ ಮೇಲೆ ಡಿಕ್ಕಿ ಹೊಡೆದಾಗ ಸುಮಾರು ಸುಮಾರು 40 ಯೋಧರು ಸ್ಥಳದಲ್ಲಿಯೇ ಹುತಾತ್ಮರಾದರು. 


ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು. ಪ್ರಧಾನಿ ನರೇಂದ್ರ ಮೋದಿ ಈ ದಾಳಿ ನಂತರ ನನ್ನ ಹೃದಯದೊಳಗೆ ಸಹ ಅದೇ ರೀತಿ ದಾಳಿ ಮಾಡಬೇಕೆಂಬ ಆಕ್ರೋಶ ಕುದಿಯುತ್ತಿದೆ ಎಂದು ಹೇಳಿದ್ದರು.ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರ ಖಂಡಿತಾ ತೀರಿಸುತ್ತೇವೆ. ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಘೋಷಿಸಿದ್ದರು.


ಪುಲ್ವಾಮಾ ದಾಳಿಯನ್ನು ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನಾದ್ಯಂತ ದೇಶಗಳು ಖಂಡಿಸಿ ಭಾರತಕ್ಕೆ ಉಗ್ರರ ವಿರುದ್ಧ ದಾಳಿಯಲ್ಲಿ ಬೆಂಬಲ ಸೂಚಿಸಿದ್ದವು.ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾ ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯಕ್ಕೆ ಬೆಂಬಲ ಸೂಚಿಸಿ ಇದೊಂದು ಹೇಡಿ ಕೃತ್ಯ ಎಂದು ಟೀಕಿಸಿತ್ತು. 


ಈ ಭೀಕರ ದಾಳಿ ನಂತರ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಬೇಕೆಂಬ ಭಾರತದ ರಾಜತಾಂತ್ರಿಕ ಪ್ರಯತ್ನ ಕೊನೆಗೆ ಕಳೆದ ವರ್ಷ ಮೇ 1ರಂದು ಕಾರ್ಯರೂಪಕ್ಕೆ ಬಂತು. 


ಈ ಪುಲ್ವಾಮಾ ದಾಳಿ ನಡೆದು ಸರಿಯಾಗಿ 12 ದಿನಗಳ ನಂತರ ಅಂದರೆ ಕಳೆದ ವರ್ಷ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಕೈಬರ್ ಪುಕ್ತುಂಖ್ವಾದ ಬಾಲಕೋಟ್ ನಲ್ಲಿರುವ ಜೆಇಎಂ ಶಿಬಿರದ ಮೇಲೆ ವಾಯುದಾಳಿ ನಡೆಸಿ ಅನೇಕ ಉಗ್ರರನ್ನು ಹತ್ಯೆಗೈಯಿತು. 

SCROLL FOR NEXT