ದೇಶ

ವನ್ಯಜೀವಿಗಳ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ: ಪಿಎಂ ನರೇಂದ್ರ ಮೋದಿ 

Sumana Upadhyaya

ನವದೆಹಲಿ: ವನ್ಯಜೀವಿ ಮತ್ತು ಆವಾಸಸ್ಥಾನಗಳ ಸಂರಕ್ಷಣೆ, ಭಾರತದ ಸಾಂಸ್ಕೃತಿಕ ನೀತಿಗಳಲ್ಲಿ ಒಂದು ಭಾಗವಾಗಿದ್ದು ಅದು ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಕಲಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.


ಹಲವಾರು ವರ್ಷಗಳಿಂದ ವನ್ಯಜೀವಿಗಳು ಮತ್ತು ಆವಾಸಸ್ಥಾನಗಳು ನಮ್ಮ ಸಾಂಸ್ಕೃತಿಕ ನೀತಿಗಳ ಭಾಗವಾಗಿ ಬಿಟ್ಟಿದೆ. ಪ್ರಕೃತಿ, ವನ್ಯಜೀವಿಗಳು ನಮ್ಮಲ್ಲಿ ಸಹಬಾಳ್ವೆ, ಸಹಾನುಭೂತಿಗಳನ್ನು ಕಲಿಸುತ್ತದೆ ಎಂದು ಪಿಎಂ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಲಸೆ ಪ್ರಭೇದಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶ ಉದ್ದೇಶಿಸಿ ಮಾತನಾಡುವಾಗ ಹೇಳಿದರು. 


ನಮ್ಮ ವೇದ, ಉಪನಿಷತ್ತುಗಳಲ್ಲಿ ಕಾಡುಪ್ರಾಣಿಗಳ ಸಂರಕ್ಷಣೆ ಬಗ್ಗೆ ಹೇಳಿದ್ದಾರೆ. ಮೌರ್ಯ ಸಾಮ್ರಾಜ್ಯದ ಮಹಾನ್ ದೊರೆ ಅಶೋಕ ಅರಣ್ಯ ನಾಶ ಮತ್ತು ಪ್ರಾಣಿಗಳನ್ನು ಕೊಲ್ಲಬಾರದು ಎಂದು ಹೇಳುತ್ತಿದ್ದರು. ಭಾರತ ದೇಶ ಹಲವು ಜೈವಿಕ ಜೀವಿಗಳ ಆವಾಸಸ್ಥಾನವಾಗಿದೆ. ಇಲ್ಲಿ 4 ಜೀವ ವೈವಿಧ್ಯ ಕೇಂದ್ರಗಳಿವೆ. ವಿಶ್ವದ ಶೇಕಡಾ 2.4ರಷ್ಟು ಭೂ ಪ್ರದೇಶಗಳಲ್ಲಿ ಜೀವ ವೈವಿಧ್ಯತೆಯಿದ್ದು ಅವುಗಳಲ್ಲಿ ಶೇಕಡಾ 8ರಷ್ಟು ಕೊಡುಗೆ ಭಾರತದ್ದಾಗಿದೆ ಎಂದರು.


ಭಾರತದ ಹಿಮಾಲಯ, ಪಶ್ಚಿಮ ಘಟ್ಟಗಳು, ಭಾರತ-ಮಯನ್ಮಾರ್ ಭೂ ಪ್ರದೇಶಗಳು, ಅಂಡಮಾನ್-ನಿಕೋಬರ್ ದ್ವೀಪಗಳು ಹಲವು ಜೀವ ವೈವಿಧ್ಯಗಳ ತಾಣಗಳಾಗಿವೆ. ಜಗತ್ತಿನ ಸುಮಾರು 500 ಪ್ರಭೇದಗಳ ವಲಸೆ ಹಕ್ಕಿಗಳಿಗೆ ಭಾರತ ನೆಲೆಯಾಗಿದೆ ಎಂದರು.


ಇಷ್ಟೆಲ್ಲಾ ಜೀವ ವೈವಿಧ್ಯತೆಗಳ ರಕ್ಷಣೆ ಬಗ್ಗೆ ಮಾತನಾಡಿದ ಪ್ರಧಾನಿ, ಹವಾಮಾನ ಬದಲಾವಣೆಯಿಂದ ಜೀವಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತಡೆಗಟ್ಟಲು ಭಾರತ ಪ್ರಯತ್ನಿಸುತ್ತಿದ್ದು ಸಂರಕ್ಷಣೆಯ ಮೌಲ್ಯ, ಸುಸ್ಥಿರ ಜೀವನಶೈಲಿ ಮತ್ತು ಹಸಿರು ಅಭಿವೃದ್ಧಿ ಮಾದರಿಯನ್ನು ಅನುಸರಿಸುತ್ತಿದೆ ಎಂದರು.


ಇನ್ನು ಗುಜರಾತ್ ನಲ್ಲಿ ಸಮ್ಮೇಳನ ನಡೆಯುತ್ತಿರುವಾಗ ಮಹಾತ್ಮಾ ಗಾಂಧಿಯವರನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡ ಪ್ರಧಾನಿ ಅಹಿಂಸೆ ಮತ್ತು ಪ್ರಾಣಿ-ಪಕ್ಷಿಗಳ ರಕ್ಷಣೆಗೆ, ಪ್ರಕೃತಿಯನ್ನು ಕಾಪಾಡುವುದಕ್ಕೆ ಗಾಂಧೀಜಿಯವರು ಪ್ರೋತ್ಸಾಹಿಸುತ್ತಿದ್ದರು. ಅವರ ತತ್ವ, ಆದರ್ಶಗಳಂತೆ ಅದನ್ನು ಸಂವಿಧಾನದಲ್ಲಿ, ಕಾನೂನು ಮತ್ತು ಶಾಸನಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.

SCROLL FOR NEXT