ದೇಶ

ಭಾರತ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬ್ರಿಟಿಷ್ ಸಂಸದೆಯ ವೀಸಾ ರದ್ದು: ಸರ್ಕಾರದ ಮೂಲಗಳು

Lingaraj Badiger

ನವದೆಹಲಿ: ಭಾರತ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬ್ರಿಟನ್‌ ಸಂಸದೆ ಡೆಬ್ಬಿ ಅಬ್ರಹಾಮ್ಸ್‌ ಅವರ ಇ-ಬ್ಯುಸಿನೆಸ್ ವೀಸಾ ರದ್ದುಗೊಳಿಸಲಾಗಿದೆ ಮತ್ತು ಈ ಕುರಿತು ಫೆಬ್ರವರಿ 14ರಂದೇ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಮಂಗಳವಾರ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ವೀಸಾ ನಿರಾಕರಿಸುವುದು, ನೀಡುವುದು ಅಥವಾ ರದ್ದುಗೊಳಿಸುವುದು ಒಂದು ದೇಶದ ಸಾರ್ವಭೌಮ ಹಕ್ಕು ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಬ್ರಿಟಿಷ್ ಸಂಸದೆ ಡೆಬ್ಬಿ ಅವರು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಅವರ ವೀಸಾ ರದ್ದುಗೊಳಿಸಲಾಗಿದೆ ಮತ್ತು ಈ ಕುರಿತು ಫೆಬ್ರವರಿ 14ರಂದೇ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡೆಬ್ಬಿ ಅವರು ಕಳೆದ ವರ್ಷ ಅಕ್ಟೋಬರ್ 7ರಂದು ಇ-ಬ್ಯುಸಿನೆಸ್ ವೀಸಾ ನೀಡಲಾಗಿದ್ದು, ಅದು ಅಕ್ಟೋಬರ್ 5, 2020ರ ವರೆಗೆ ಮಾನ್ಯವಾಗಿರುತ್ತದೆ. ಆದರೆ ಭಾರತ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅವರ ವೀಸಾ ರದ್ದುಗೊಳಿಸಲಾಗಿದೆ.

ಈ ಹಿಂದೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ದಿಟ್ಟ ಕ್ರಮಗಳ ಡೆಬ್ಬಿ ಕಟುವಾಗಿ ಟೀಕಿಸಿದ್ದರು. 

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ಕಣಿವೆಯಲ್ಲಿ ಕಠಿಣ ನಿರ್ಬಂಧಗಳನ್ನು ಹೇರಿದ್ದನ್ನು ಖಂಡಿಸಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಲೇಖನ ಬರೆದಿದ್ದರು. ಅಲ್ಲದೆ ಬ್ರಿಟನ್‌ನಲ್ಲಿರುವ ರಾಯಭಾರ ಕಚೇರಿಗೆ ಪತ್ರವೊಂದನ್ನೂ ಬರೆದಿದ್ದರು.

SCROLL FOR NEXT