ದೇಶ

ಟ್ರಂಪ್ ಸ್ವಾಗತಿಸಲು 70 ಲಕ್ಷ ಜನ ಸೇರಿಸಲು ಅವರೇನು ದೇವರೇ?: ಕಾಂಗ್ರೆಸ್

Lingaraj Badiger

ನವದೆಹಲಿ: ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಕಾಂಗ್ರೆಸ್, ಟ್ರಂಪ್ ಸ್ವಾಗತಿಸಲು 70 ಲಕ್ಷ ಜನರನ್ನು ಸೇರಿಸಲು ಅವರೇನು ದೇವರೇ? ಎಂದು ಪ್ರಶ್ನಿಸಿದೆ.

ಎಎನ್ಐ ಜತೆ ಮಾತನಾಡಿದ ಲೋಕಸಭೆ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರು, ಟ್ರಂಪ್ ಸ್ವಾಗತಿಸಲು 70ಲಕ್ಷ ಜನರನ್ನು ಸೇರಿಸುವ ಅಗತ್ಯ ಏನಿದೆ? ಅವರೇನು ದೇವರೇ?. ಟ್ರಂಪ್ ತಮ್ಮ ಸ್ವಹಿತಾಸಕ್ತಿಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಅವರು ಯಾವುದೇ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುತ್ತಿಲ್ಲ. ಅವರು ಅಮೆರಿಕಕ್ಕೆ ಲಾಭ ಮಾಡಿಕೊಳ್ಳುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಡೊನಾಲ್ಡ್‌ ಟ್ರಂಪ್‌ ಅವರು ಫೆಬ್ರವರಿ 24, 25ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದು, ಎರಡು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಫೆ. 24ರಂದು ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ ಇದೇ ಕಾರಿನಲ್ಲಿ ಟ್ರಂಪ್‌ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್‌ ದಂಪತಿ ಮೊಟೆರಾದ ಸರ್ದಾರ್‌ ಪಟೇಲ್‌ ಸ್ಟೇಡಿಯಂಗೆ ಪ್ರಯಾಣ ಬೆಳೆಸಲಿದ್ದಾರೆ. ಜತೆಗೆ ಸಬರಮತಿ ಆಶ್ರಮ, ತಾಜ್‌ ಮಹಲ್‌ ಸೇರಿ ಹಲವೆಡೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. 

ಇನ್ನು ಟ್ರಂಪ್ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಯಮುನಾ ನದಿಗೆ 500 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ .

ಯಮುನಾ ನದಿಯ ಸುಸುತ್ತಮುತ್ತಲ ಪ್ರದೇಶದ'ಪರಿಸರದ ಪರಿಸ್ಥಿತಿ' ಸುಧಾರಿಸಲು ಉತ್ತರಪ್ರದೇಶದ ನೀರಾವರಿ ಇಲಾಖೆ ಯಮುನಾ ನದಿಗೆ ನೀರು ಬಿಡುಗಡೆ ಮಾಡಿದೆ.

SCROLL FOR NEXT