ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಹಮದಾಬಾದ್ ನಲ್ಲಿ ಮೊಟೆರಾ ಕ್ರೀಡಾಂಗಣ ಉದ್ಘಾಟನೆಗೆ ಹೋಗುವ ಹಾದಿ ಮಧ್ಯೆ ರೋಡ್ ಶೋನಲ್ಲಿ ಅವರನ್ನು 70 ಲಕ್ಷ ಜನರು ಸ್ವಾಗತಿಸುತ್ತಾರೆ ಎಂದು ಹಲವು ದಿನಗಳಿಂದ ಸುದ್ದಿಯಾಗುತ್ತಿದೆ. ಸ್ವತಃ ಟ್ರಂಪ್ ಅವರೇ ನಿನ್ನೆ ಹೇಳಿಕೊಂಡಿದ್ದರು. ಆದರೆ ಅಹಮದಾಬಾದ್ ನ ಒಟ್ಟಾರೆ ಜನಸಂಖ್ಯೆಯೇ 70ರಿಂದ 80 ಲಕ್ಷ. ಹೀಗಿರುವಾಗ 70 ಲಕ್ಷ ಜನ ಎಲ್ಲಿಂದ ಬರುತ್ತಾರೆ ಎಂದು ಹಲವರಿಗೆ ಸಂಶಯ ಉಂಟಾಗಿದ್ದಂತೂ ಸುಳ್ಳಲ್ಲ.
ಆದರೆ ಫೆಬ್ರವರಿ 24ರಂದು ಅಹಮದಾಬಾದ್ ಸಬರ್ಮತಿ ಆಶ್ರಮದಿಂದ 22 ಕಿಲೋ ಮೀಟರ್ ದೂರದವರೆಗೆ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ರೋಡ್ ಶೋ ಮಾಡುವಾಗ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅಹಮದಾಬಾದ್ ನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
ಕೆಲ ದಿನಗಳ ಹಿಂದೆ ಅಹಮದಾಬಾದ್ ನಗರ ಆಯುಕ್ತ ವಿಜಯ್ ನೆಹ್ರ ಕೂಡ ಇದೇ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಅಧಿಕಾರಿಗಳಿಗೆ ಬಂದಿರುವ ಯೋಜನೆ ಪ್ರಕಾರ ಟ್ರಂಪ್ ಮತ್ತು ಮೋದಿಯವರು ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲಿಗೆ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಅಲ್ಲಿಂದ ಅಹಮದಾಬಾದ್ ನ ಎಸ್ಪಿ ರಿಂಗ್ ರೋಡ್ ಮೂಲಕ ಇಂದಿರಾ ಬ್ರಿಜ್ಡ್ ಆಗಿ ಹೊಸದಾಗಿ ನಿರ್ಮಾಣವಾಗಿರುವ ಕ್ರಿಕೆಟ್ ಸ್ಟೇಡಿಯಂ ಮೊಟೆರಾಗೆ ತಲುಪಲಿದ್ದಾರೆ. ಇದು 22 ಕಿಲೋ ಮೀಟರ್ ಉದ್ದದ ಸಂಚಾರವಾಗಿರುತ್ತದೆ.