ದೇಶ

ಗಡುವಿಗೆ ಮುನ್ನವೇ  ಡೆತ್ ವಾರೆಂಟ್ ಜಾರಿ: ಅಧೀನ ನ್ಯಾಯಾಲಯಗಳ ಪ್ರವೃತ್ತಿಗೆ ಸುಪ್ರೀಂ ಗರಂ

Lingaraj Badiger

ನವದೆಹಲಿ: ಮರಣ ದಂಡನೆ ಶಿಕ್ಷೆಗೊಳಗಾಗಿರುವ ಅಪರಾಧಿಗಳು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು   ಇರುವ ಗಡುವಿಗೆ ಮುನ್ನವೇ ವಿಚಾರಣಾ ನ್ಯಾಯಾಲಯಗಳು ಡೆತ್ ವಾರಂಟ್ ಜಾರಿಗೊಳಿಸಲು ಆದೇಶ  ನೀಡುತ್ತಿರುವ ಪ್ರವೃತ್ತಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ತಪ್ಪಿತಸ್ಥನೊಬ್ಬ ಸಲ್ಲಿಸಿದ ಆರ್ಜಿ ವಿಚಾರಣೆಯ ವೇಳೆ   ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಗಳ ಪ್ರವೃತ್ತಿಗೆ ತೀವ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಎರಡು ವರ್ಷಗಳ ಹಿಂದೆ ಸೂರತ್ ನಗರದಲ್ಲಿ ಮೂರು ವರ್ಷದ ಪುಟ್ಟ ಮಗುವಿನ ಮೇಲೆ ನಡೆದಿದ್ದ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಅನಿಲ್ ಸುರೇಂದ್ರ ಯಾದವ್ ಎಂಬ ತಪ್ಪಿತಸ್ಥನಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದರೊಂದಿಗೆ ಫೆಬ್ರವರಿ ೨೯ ರಂದು ಅಪರಾಧಿಗೆ ಮರಣದಂಡನೆ ಶಿಕ್ಷೆ ಜಾರಿಗೊಳಿಸುವಂತೆ   ಗುಜರಾತ್ ಸೆಷನ್ಸ್ ನ್ಯಾಯಾಲಯ ಡೆತ್ ವಾರಂಟ್ ಹೊರಡಿಸಿದೆ.

ಈ ಡೆತ್ ವಾರಂಟ್ ವಿರುದ್ಧ ತಪ್ಪಿತಸ್ಥ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾನೆ. ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಗಡುವು ಮುಗಿಯುವ ಮೊದಲೇ ತನ್ನ ವಿರುದ್ಧ ಡೆತ್ ವಾರಂಟ್ ಹೊರಡಿಸಲಾಗಿದೆ ಎಂದು ಅಪರಾಧಿ  ತನ್ನ  ಅರ್ಜಿಯಲ್ಲಿ ತಕರಾರು ಎತ್ತಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದೆ.

ಮರಣದಂಡನೆ ಶಿಕ್ಷೆಯ  ವಿರುದ್ದ ತಪ್ಪಿತಸ್ಥ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ೬೦ ದಿನಗಳ ಗಡುವು ಮುಗಿಯುವ ಮೊದಲು ಅಧೀನ ನ್ಯಾಯಾಲಯಗಳು ಡೆತ್  ವಾರೆಂಟ್ ಹೊರಡಿಸಬಾರದು ಎಂದು ೨೦೧೫ ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಪೀಠ ನೆನಪಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ, ಅಧೀನ ನ್ಯಾಯಾಲಯಗಳು ಹೇಗೆ  ಡೆತ್  ವಾರೆಂಟ್  ಹೊರಡಿಸುತ್ತವೆ? ಎಂದು ಪ್ರಶ್ನಿಸಿದೆ.  ಈ ಕುರಿತು ಯಾರೋ ಒಬ್ಬರು ನಮಗೆ ಉತ್ತರ ನೀಡಬೇಕು ಎಂದು  ಆದೇಶಿಸಿರುವ ನ್ಯಾಯಪೀಠ, ನ್ಯಾಯ ವ್ಯವಸ್ಥೆ ಈ ರೀತಿ ಸಾಗುವುದನ್ನು ಎಂದಿಗೂ ಒಪ್ಪಲಾಗದು ಎಂದು ಬೇಸರ ವ್ಯಕ್ತಪಡಿಸಿದೆ.

ಅಧೀನ ನ್ಯಾಯಾಲಯಗಳು ಈ ರೀತಿ ಡೆತ್ ವಾರೆಂಟ್ ಜಾರಿಗೊಳಿಸಲು  ಕಾರಣಗಳೇನು...?   ಎಂಬುದನ್ನು   ತಿಳಿದುಕೊಳ್ಳುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಪೀಠ  ಆದೇಶಿಸಿದೆ.

ತಪ್ಪಿತಸ್ಥ ಅನಿಲ್ ಸುರೇಂದ್ರ ಯಾದವ್ ವಿರುದ್ಧ ಗುಜರಾತ್ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಡೆತ್ ವಾರಂಟ್ ಗೆ  ಸುಪ್ರೀಂ ಕೋರ್ಟ್ ತಡೆ ನೀಡಿದೆ.

SCROLL FOR NEXT