ದೇಶ

ಡೊನಾಲ್ಡ್ ಟ್ರಂಪ್ ಅವರ ಎರಡು ದಿನಗಳ ಭಾರತ ಭೇಟಿ: ಕಾರ್ಯಕ್ರಮ ವೇಳಾಪಟ್ಟಿ ಹೀಗಿದೆ

Sumana Upadhyaya

ನವದೆಹಲಿ: ತಮ್ಮ ಎರಡು ದಿನಗಳ ಚೊಚ್ಚಲ ಭಾರತ ಭೇಟಿಗೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯಕ್ರಮದ ವೇಳಾಪಟ್ಟಿ ನಿಗದಿಯಾಗಿದೆ.

ವೇಳಾಪಟ್ಟಿ ಹೀಗಿದೆ: ಎರಡು ದಿನಗಳಲ್ಲಿ ಟ್ರಂಪ್ ಅವರು ಭಾರತದಲ್ಲಿ ಕಳೆಯುತ್ತಿರುವುದು 36 ಗಂಟೆಗಳು. ಅಹಮದಾಬಾದ್ ನ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಇಂದು ಮಧ್ಯಾಹ್ನ 12.15ರ ಹೊತ್ತಿಗೆ ಸಬರ್ಮತಿ ಆಶ್ರಮಕ್ಕೆ ಭೇಟಿ.

ಅಲ್ಲಿಂದ ಮೋದಿ ಮತ್ತು ಟ್ರಂಪ್ ಅವರು ರೋಡ್ ಶೋ ಮೂಲಕ ಮೊಟೆರಾ ಸ್ಟೇಡಿಯಂಗೆ ತಲುಪಲಿದ್ದಾರೆ. ಅಲ್ಲಿ ನಮಸ್ತೆ ಟ್ರಂಪ್ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ನರೇಂದ್ರ ಮೋದಿಯವರು ಅಮೆರಿಕಕ್ಕೆ ಹೋಗಿದ್ದಾಗ ನಡೆದಿದ್ದ ಹೌಡಿ ಮೋದಿ ಮಾದರಿಯ ಕಾರ್ಯಕ್ರಮವಿದು. 

ಅಹಮದಾಬಾದ್ ನ ಕಾರ್ಯಕ್ರಮ ಮುಗಿಸಿ ಸಾಯಂಕಾಲ 5.15ರ ಹೊತ್ತಿಗೆ ವಿಶ್ವಪ್ರಸಿದ್ದ ತಾಜ್ ಮಹಲ್ ಭೇಟಿ, ಅಲ್ಲಿ ಸುಮಾರು 45 ನಿಮಿಷಗಳ ಕಾಲ ಟ್ರಂಪ್ ದಂಪತಿ ಕಳೆದು ನೇರವಾಗಿ ರಾಜಧಾನಿ ದೆಹಲಿಗೆ ಪಯಣ.

ನಾಳೆ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಟ್ರಂಪ್ ಅವರಿಗೆ ಔಪಚಾರಿಕ ಸ್ವಾಗತ. ಅಲ್ಲಿಂದ ಮಹಾತ್ಮಾ ಗಾಂಧಿ ಸ್ಮಾರಕ ರಾಜ್ ಘಾಟ್ ಗೆ ತೆರಳಿ ಗೌರವ ನಮನ. ನಂತರ ಟ್ರಂಪ್ ಮತ್ತು ಮೋದಿಯವರಿಂದ ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ಅಪರಾಹ್ನ ನಿಯೋಗ ಮಟ್ಟದ ಮಾತುಕತೆ.

ಮಾತುಕತೆ ನಂತರ ಹಲವು ಒಪ್ಪಂದ ಮತ್ತು ಒಡಂಬಡಿಕೆಗಳ ವಿನಿಮಯ. ಬೌದ್ಧಿಕ ಆಸ್ತಿ, ವ್ಯಾಪಾರ ಸೌಲಭ್ಯ ಮತ್ತು ತಾಯ್ನಾಡಿನ ಭದ್ರತೆ ಸೇರಿದಂತೆ 5 ನಿಲುವಳಿ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. 

ನಾಳೆ ರಾತ್ರಿ ಅಮೆರಿಕಕ್ಕೆ ವಿಶೇಷ ವಿಮಾನದಲ್ಲಿ ತಾಯ್ನಾಡಿಗೆ ತೆರಳುವ ಮುನ್ನ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿರುವ ಟ್ರಂಪ್.

SCROLL FOR NEXT