ದೇಶ

ತಿರುಪತಿಯಿಂದ ತಿರುಮಲಕ್ಕೆ ಮೋನೋ ರೈಲು?

Srinivasamurthy VN

ತಿರುಪತಿ: ಇನ್ನು ಮುಂದೆ ತಿರುಮಲಕ್ಕೆ ಭಕ್ತರು ರೈಲಿನಲ್ಲಿ ಪ್ರಯಾಣ ಮಾಡಬಹುದು..

ಅರೆ ಇದೇನಿದು ತಿರುಮಲಕ್ಕೆ ರೈಲು ಸಂಪರ್ಕವೇ ಇಲ್ಲ. ಹೀಗಿರುವಾಗ ರೈಲು ಪ್ರಯಾಣ ಹೇಗೆ ಸಾದ್ಯ ಎಂಬುದು ನಿಮ್ಮ ಪ್ರಶ್ನೆಯಾದರೆ ಇದಕ್ಕೆ ಉತ್ತರ ಇಲ್ಲಿದೆ..

ಹೌದು.. ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ಬರುವ ಭಕ್ತರು ಬಸ್ಸು ಅಥವಾ ಇತರೆ ವಾಹನದಲ್ಲಿ ತಿರುಮಲಕ್ಕೆ ಪ್ರಯಾಣಿಸಬೇಕು. ಆದರೆ ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ತಿಮ್ಮಪ್ಪನ ಭಕ್ತರು ತಿರುಪತಿಯಿಂದ ತಿರುಮಲಕ್ಕೆ ರೈಲಿನಲ್ಲಿ ಪ್ರಯಾಣಿಸಬಹುದು.

ಇಂತಹುದೊಂದು ಕಾರ್ಯಕ್ಕೆ ಟಿಟಿಡಿ ಕೈ ಹಾಕಿದ್ದು, ಟಿಟಿಡಿ ಈ ಕುರಿತ ಸಾಧ್ಯಸಾಧ್ಯತೆಗಳ ಕುರಿತು ಚರ್ಚೆ ನಡೆಸುತ್ತಿದೆ. ಮೂಲಗಳ  ಪ್ರಕಾರ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರು, ಹೈದರಾಬಾದ್ ಮೆಟ್ರೋ ರೈಲು ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಎನ್ ವಿಎಸ್ ರೆಡ್ಡಿ ಅವರೊಂದಿಗೆ ಈ ಕುರಿತಂತೆ ಚರ್ಚೆ ನಡೆಸಿದ್ದು, ಒಂದು ಪ್ರಸ್ತಾಪ ಕೂಡ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಅಂತೆಯೇ ಇತ್ತೀಚೆಗಷ್ಟೇ ಎನ್ ವಿಎಸ್ ರೆಡ್ಡಿ ಮತ್ತು ಅವರ ತಂಡ ತಿರುಮಲಕ್ಕೆ ಭೇಟಿ ನೀಡಿ ಮೆಟ್ರೋ ರೈಲು ಸಂಪರ್ಕದ ಕುರಿತು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲೇ ತಮ್ಮ ವರದಿ ನೀಡುವ ಸಾದ್ಯತೆ ಇದೆ.

ಈ ಕುರಿತಂತೆ ಮಾತನಾಡಿರುವ ಸುಬ್ಬಾರೆಡ್ಡಿ ಅವರು, ತಿರುಮಲದ ಪರಿಸರ ರಕ್ಷಿಸುವ ನಿಟ್ಟಿನಲ್ಲಿ ಮತ್ತು ಉತ್ತಮ ಸಾರಿಗೆ ಸಂಪರ್ಕ ಸಾಧಿಸುವ ಸಲುವಾಗಿ ಮೋನೋ ಅಥವಾ ಮೆಟ್ರೋ ರೈಲು ಉತ್ತಮ ಆಯ್ಕೆಯಾಗಿದೆ. ಹೀಗಾಗಿ ಎನ್ ವಿಎಸ್ ರೆಡ್ಡಿ ಅವರಿಗೆ ನಾನು ಈ ಕುರಿತು ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೆ. ಈಗಾಗಲೇ ಅವರ ತಂಡ ತಿರುಮಲಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿತ್ತು. ಶೀಘ್ರದಲ್ಲೇ ಈ ಕುರಿತ ವರದಿ ನಮ್ಮ ಕೈ ಸೇರಲಿದೆ ಎಂದು ಹೇಳಿದ್ದಾರೆ.

SCROLL FOR NEXT