ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯ ಹೈದರಾಬಾದ್ ಹೌಸ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈಗ ಮಾತುಕತೆ ನಡೆಸುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಟ್ರಂಪ್ ಸಶಸ್ತ್ರ ಪಡೆಗಳ ಮೂರು ವಿಭಾಗಗಳಿಂದ ಗೌರವ ವಂದನೆ ಸ್ವೀಕರಿಸಿದರು. ಅಲ್ಲಿಂದ ಟ್ರಂಪ್ ದಂಪತಿ ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಟ್ರಂಪ್ ದಂಪತಿ ರಾಜ್‌ಘಾಟ್‌ನಲ್ಲಿ ಸಸಿಯೊಂದನ್ನು ನೆಟ್ಟರು.
ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಜೊತೆಯಾಗಿ ಹೈದರಾಬಾದ್ ಹೌಸ್ ಗೆ ತರಳಿದರು. ಇಲ್ಲಿ ಭಾರತ ಮತ್ತು ಅಮೆರಿಕ ನಡುವೆ ನಿಯೋಗ ಮಟ್ಟದ ಮಾತುಕತೆಗಳು ನಡೆಯುತ್ತಿದೆ.
ಉಭಯ ದೇಶಗಳು ೩೦೦ ಕೋಟಿ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದ ಸೇರಿದಂತೆ ಐದು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಮೋದಿ, ಟ್ರಂಪ್ ಮಾತುಕತೆಯಲ್ಲಿ ಹಲವು ದ್ವಿಪಕ್ಷೀಯ, ಅಂತರಾಷ್ಟ್ರೀಯ ವಿಷಯಗಳನ್ನು ಪ್ರಸ್ತಾವನೆಗೊಳ್ಳುವ ಸಾಧಯತೆಯಿದೆ.
ದ್ವಿಪಕ್ಷೀಯ ಮಾತುಕತೆ ಆರಂಭಕ್ಕೆ ಮುನ್ನ, ಡೊನಾಲ್ಡ್ ಟ್ರಂಪ್, ಭಾರತಕ್ಕೆ ಬರುವುದು ನನಗೆ ಅತೀವ ಗೌರವದ ವಿಚಾರ. ಭಾರತದ ಭವ್ಯ ಸ್ವಾಗತಕ್ಕೆ ಅಭಿನಂದನೆಗಳು. ಈ ಭೇಟಿ ಅವಿಸ್ಮರಣೀಯ ಎಂದಿದ್ದಾರೆ. ನಿನ್ನೆ ಅಹಮದಾಬಾದ್ ನ ಮೊಟೆರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮ ನನಗೆ ಸಿಕ್ಕ ಗೌರವವಾಗಿದೆ. ನಾನು ಪ್ರಧಾನಿ ಮೋದಿ ಬಗ್ಗೆ ಮಾತನಾಡುವಾಗ ಅಲ್ಲಿ ಸೇರಿದ್ದ ಜನ ಚಪ್ಪಾಳೆ ತಟ್ಟಿ ಅನುಮೋದಿಸುತ್ತಿದ್ದರು, ಅಲ್ಲಿದ್ದ ಜನರು ನನಗಿಂತ ಹೆಚ್ಚು ಪ್ರಧಾನಿ ಮೋದಿಯ ಮೇಲಿನ ಪ್ರೀತಿ, ಅಭಿಮಾನಕ್ಕಾಗಿ ಬಂದಿದ್ದರು. ಸುಮಾರು 1 ಲಕ್ಷದ 25 ಸಾವಿರ ಮಂದಿ ಸ್ಟೇಡಿಯಂ ಒಳಗಿದ್ದರು. ಅವರನ್ನೆಲ್ಲ ನೋಡಲು ಖುಷಿಯಾಗುತ್ತಿತ್ತು ಎಂದು ಹೇಳಿದರು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಮಾತನಾಡಿದ ಪಿಎಂ ಮೋದಿ, ನಿಮಗೆ ಮತ್ತು ಅಮೆರಿಕ ನಿಯೋಗಕ್ಕೆ ಸ್ವಾಗತ, ನಿಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆ ಭಾರತಕ್ಕೆ ಭೇಟಿ ನೀಡಿರುವುದು ನಮಗೆ ಸಂತೋಷ ತಂದಿದೆ ಎಂದರು.
ಇನ್ನು ಕೆಲವೇ ಹೊತ್ತಿನಲ್ಲಿ ಉಭಯ ನಾಯಕರ ಮಧ್ಯೆ ಏನೇನು ಒಪ್ಪಂದಗಳಾದವು,ಏನು ಚರ್ಚೆಗಳು ನಡೆದವು ಎಂದು ಮಾಧ್ಯಮಗಳ ಮುಂದೆ ವಿವರ ನೀಡಲಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರೈತರಿಗೆ ತೊಂದರೆಯಾಗುವ ಯಾವುದೇ ರೀತಿಯ ಒಪ್ಪಂದವನ್ನು ಭಾರತ ಅಮೆರಿಕ ಜೊತೆ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.