ದೇಶ

2020ರ ಅಮೆರಿಕ ಚುನಾವಣೆಯಲ್ಲಿ ನಾನು ಸೋತರೆ ಷೇರು ಮಾರುಕಟ್ಟೆ ಕುಸಿತ: ಟ್ರಂಪ್

Lingaraj Badiger

ನವದೆಹಲಿ: ಇದೇ ವರ್ಷ ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ನಾನು ಸೋತರೆ ಷೇರು ಮಾರುಕಟ್ಟೆ ಭಾರೀ ಕುಸಿತ ಕಾಣಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಯಲ್ಲಿ ಭಾರತೀಯ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ನಾವು ಇದುವರೆಗೆ ಏನು ಮಾಡಿದ್ದೇವೆ ಅನ್ನುವುದನ್ನು ನೋಡಿದರೆ ನಾನು ಮತ್ತೆ ಗೆಲ್ಲುತ್ತೇನೆ ಮತ್ತು ಅದು ನಿಮಗೆ ಅರ್ಥವಾಗುತ್ತದೆ. ಹೀಗಾಗಿಯೇ ನೀವು ಅಮೆರಿಕದಲ್ಲಿ ಸಂತೋಷವಾಗಿದ್ದೀರಿ ಎಂದರು.

ನಮ್ಮ ಆಡಳಿತ ಜಾರಿಗೆ ತಂದಿರುವ ತೆರಿಗೆ ಮತ್ತು ನಿಯಂತ್ರಣ ಕಡಿತದ ಲಾಭ ಪಡೆಯಲು ನೀವು ಅಮೆರಿಕದಲ್ಲಿ ಬಿಲಿಯನ್ ಡಾಲರ್ ಹೂಡಿಕೆ ಮಾಡಿ ಎಂದು ಟ್ರಂಪ್ ಭಾರತೀಯ ಉದ್ಯಮಿಗಳಿಗೆ ಆಹ್ವಾನ ನೀಡಿದರು.

ಅಮೆರಿಕದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಹೆಚ್ಚುತ್ತಿರುವ ಉದ್ಯೋಗಗಳಿಂದಾಗಿ ಅಲ್ಲಿನ ಗ್ರಾಹಕರು ಹೆಚ್ಚು ಆದಾಯವನ್ನು ಹೊಂದಿದ್ದಾರೆ ಎಂದು ಟ್ರಂಪ್ ಹೇಳಿದರು.

ವಿದೇಶಿ ಹೂಡಿಕೆಯನ್ನು ಹೆಚ್ಚಿಸಲು ತಮ್ಮ ಸರ್ಕಾರ ಆರ್ಥಿಕ ನಿರ್ಬಂಧಗಳನ್ನು ಮತ್ತು ನಿಯಮಗಳನ್ನು ಸಡಿಲಗೊಳಿಸುತ್ತದೆ ಎಂದು ಭರವಸೆ ನೀಡಿದ ಟ್ರಂಪ್ ಅವರು,  ಕೆಲವು ನಿಯಮಗಳು ಶಾಸನಬದ್ಧ ಪ್ರಕ್ರಿಯೆಯ ಮೂಲಕ ಹೋಗಬೇಕಾಗಿದೆ. ಆದರೆ ಹೆಚ್ಚಿನ ನಿಯಮಗಳನ್ನು ಕಡಿತಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
  
ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿ ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್, ತಮ್ಮ ಸರ್ಕಾರ ಆರ್ಥಿಕತೆ, ಆರೋಗ್ಯ ಮತ್ತು ಸೇನಾ ವಲಯಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಿದರು.
  
ಮಾರಣಾಂತಿಕ ಕೊರೋನಾ ವೈರಸ್ ಹರಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, ಸೋಂಕು ನಿಯಂತ್ರಣಕ್ಕೆ ಚೀನಾ ತುಂಬಾ ಶ್ರಮಿಸುತ್ತಿದೆ.  ತಾವು ಈ  ಕುರಿತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ.
  
ಸಿಇಒಗಳ ಸಭೆಯಲ್ಲಿ ಅಮೆರಿಕ ಇಂಧನ ಕಾರ್ಯದರ್ಶಿ ಡಾನ್ ಬ್ರೌಲೆಟ್ ಮಾತನಾಡಿ,  ಕಳೆದ ಮೂರು ವರ್ಷಗಳಲ್ಲಿ ಭಾರತದಿಂದ ಅಮೆರಿಕದ ಕಚ್ಚಾತೈಲ ಖರೀದಿ 10 ಪಟ್ಟು ಹೆಚ್ಚಿದೆ ಎಂದು ಹೇಳಿದರು.

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಟ್ರಂಪ್ ಅವರು ಕೊನೆಯ ದಿನವಾದ ಇಂದು ಭಾರತದ ಪ್ರಮುಖ ಉದ್ಯಮಿಗಳಾದ ಮುಕೇಶ್ ಅಂಬಾನಿ, ಆದಿತ್ಯ ಬಿರ್ಲಾ ಗ್ರೂಪ್ ನ ಕುಮಾರ್ ಮಂಗಳಂ ಬಿರ್ಲಾ ಮತ್ತು ಟಾಟಾ ಗ್ರೂಪ್ ನ ಎನ್ ಚಂದ್ರಶೇಖರನ್ ಇತರೆ ಉದ್ಯಮಿಗಳೊಂದಿಗೆ ಚರ್ಚಿಸಿದರು.

SCROLL FOR NEXT