ದೇಶ

ದೆಹಲಿಯಲ್ಲಿ ಬೀಭತ್ಸ ಹಿಂಸೆ: ಪ್ರತಿಭಟನೆ ವೇಳೆ ನಾನಾ ರೀತಿಯ ಮಾರಕಾಸ್ತ್ರ ಬಳಕೆ, ದೇಶವನ್ನೇ ಬೆಚ್ಚಿಬೀಳಿಸುತ್ತಿದೆ ದುಷ್ಕರ್ಮಿಗಳ ಕೃತ್ಯ

Manjula VN

ನವದೆಹಲಿ: ದಂಗೆ, ಕೋಮು ಗಲಭೆ ವೇಳೆ ದುಷ್ಕರ್ಮಿಗಳು, ಕಲ್ಲು, ಮಾರಾಸ್ತ್ರ ಬಳಸಿ ದಾಳಿ ಮಾಡುವುದು ಹೊಸದೇನಲ್ಲ. ಆದರೆ, ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ದುಷ್ಕರ್ಮಿಗಳು ಬಳಸಿರುವ ಅಸ್ತ್ರ, ಮಾರಾಕಾಸ್ತ್ರ ಹಾಗೂ ತಂತ್ರಗಳು ಇಡೀ ದೇಶವನ್ನೇ ಬೆಚ್ಚಿಬೀಳಿಸುತ್ತಿದೆ. 

ಜಫ್ರಾಬಾದ್ ನಲ್ಲಿ ಶನಿವಾರ ಆರಂಭವಾಗಿದ್ದ ಪ್ರತಿಭಟನೆ ಸೋಮವಾರ ಹಿಂಸಾಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಪ್ರತಿಭಟನಾಕಾರರ ಜೊತೆ ದುಷ್ಕರ್ಮಗಳೂ ಸೇರಿಕೊಂಡು ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡಿದ್ದಾರೆ. ಜೊತೆಗೆ ಕೋಮುಬಣ್ಣವೂ ಮೈತ್ತಿಕೊಂಡಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. 

ಸೋಮವಾರ ದುಷ್ಕರ್ಮಿಗಳು ಕಂಡಕಂಡವರಿಗೆ ಕಲ್ಲು,  ಇಟ್ಟಿಗೆ, ದೊಣ್ಣೆ, ಕಬ್ಬಿಣದ ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಹಲವರು ತಲ್ವಾರ್, ಖಡ್ಗವನ್ನೂ ಝಳಪಡಿಸಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪಿಸ್ತೂಲ್ ಬಳಕೆಯಾಗಿದೆ. ಹಿಂಸೆಯಲ್ಲಿ ಗಾಯಗೊಂಡವರ 200ಕ್ಕೂ ಹೆಚ್ಚು ಜನರ ಪೈಕಿ ಶೇ.50ರಷ್ಟು ಪ್ರಕರಣಗಳಲ್ಲಿ ಪೊಲೀಸರು ಮತ್ತು ಜನರು ಗುಂಡೇಟಿನಿಂದಲೇ ಗಾಯಗೊಂಡಿದ್ದಾರೆಂಬ ವಿಚಾರ ಭಾರೀ ಆತಂಕ ಸೃಷ್ಟಿಸಿದೆ. ಇದೇ ಕಾರಣಕ್ಕೆ ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. 

ಅಷ್ಟು ಸಾಲದೆಂಬಂತೆ ಹಲವು ಪ್ರದೇಶಗಳಲ್ಲಿ ಪೊಲೀಸರ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಕಟ್ಟಡಗಳ ಮೇಲೆ ನಿಂತಿ ಬಿಸಿ ನೀರನ್ನು ಎರಚಿ ವಿಕೃತಿಯನ್ನೂ ಮೆರೆಯಲಾಗಿದೆ. ಹಲವು ಸ್ಥಳಗಳಲ್ಲಿ ಪೆಟ್ರೋಲ್ ಬಾಂಬ್ ಎಸೆಯುವ ಮೂಲಕ ಎದುರಾಳಿಗಳನ್ನು ಮಟ್ಟಹಾಕುವ ಕೆಲಸಕ್ಕೂ ಕೈಹಾಕಲಾಗಿದೆ. ಅಲ್ಲದೆ, ಭಾರೀ ಪ್ರಮಾಣದಲ್ಲಿ ಕಟ್ಟಡ, ವಾಹನಗಳಿಗೆ ಬೆಂಕಿ ಹಚ್ಟಲಾಗಿದೆ. ರಸ್ತೆಯಲ್ಲಿ ಸಿಕ್ಕವರ ಜಾತಿ-ಧರ್ಮ ಕೇಳಿ ಹಲ್ಲೆ ನಡೆಸಿದ ಪೈಶಾಚಿಕ ಕೃತ್ಯಗಳೂ ಇದೀಗ ಬೆಳಕಿಗೆ ಬಂದಿವೆ. 

ಈ ನಡುವೆ ಹಿಂಸಾಚಾರದ ವೇಳೆ ದುಷ್ಕರ್ಮಿಗಳು ಅಂಗಡಿಯೊಂದಕ್ಕೆ ನುಗ್ಗಿ 19 ವರ್ಷದ ವಿವೇಕ್ ಎಂಬಾತನ ತಲೆಗೆ ಡ್ರಿಲ್ಲಿಂಗ್ ಮಷಿನ್ ನಿಂದ ಚುಚ್ಚಿದ್ದಾರೆ ಎಂಬ ಸುದ್ದಿ ಭಾರೀ ಕಳವಳ ಮೂಡಿಸಿದೆ. ಜೊತೆಹಗೆ ತಲೆಯ ಒಂದು ಭಾಗಕ್ಕೆ ಡ್ರಿಲ್ಲಿಂಗ್ ಮಷಿನ್ ಹೊಕ್ಕಿರುವ ಎಕ್ಸ್ ರೇ ರಿಪೋರ್ಟ್ ಕೂಡ ಹರಿದಾಡುತ್ತಿದ್ದು ಅದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದುಬಂದಿದೆ. 

SCROLL FOR NEXT