ದೇಶ

ದ್ವೇಷದ ಭಾಷಣ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸುವುದರಿಂದ ಶಾಂತಿ ಅಸಾಧ್ಯ: ಹೈಕೋರ್ಟ್ ಗೆ ದೆಹಲಿ ಪೊಲೀಸರು

Lingaraj Badiger

ನವದೆಹಲಿ: 34 ಮಂದಿಯನ್ನು ಬಲಿ ಪಡೆದ ದೆಹಲಿ ಗಲಭೆಗೆ ಸಂಬಂಧಿಸಿದಂತೆ ದ್ವೇಷದ ಭಾಷಣ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸರು ಗುರುವಾರ ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದಾರೆ.

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಕೂಡಲೇ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧಎಫ್ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಈ ಸಂಬಂಧ ಇಂದು ಪೊಲೀಸರ ಪರವಾಗಿ ದೆಹಲಿ ಕೋರ್ಟ್ ಗೆ ಉತ್ತರ ನೀಡಿದ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪ್ರಜ್ಞಾಪೂರ್ವಕವಾಗಿ, ಈ ಹಂತದಲ್ಲಿ ಯಾರ ವಿರುದ್ಧವೂ ದ್ವೇಷದ ಭಾಷಣಕ್ಕಾಗಿ ಎಫ್ಐಆರ್ ದಾಖಲಿಸುವುದಿಲ್ಲ. ಏಕೆಂದರೆ ಇದು ರಾಷ್ಟ್ರ ರಾಜಧಾನಿಯಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುವುದಿಲ್ಲ. ಹಿಂಸಾಚಾರ ಪ್ರಕರಣದಲ್ಲಿ 48 ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ದ್ವೇಷದ ಭಾಷಣ ಮಾಡಿದ ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬಂಧ ಏಪ್ರಿಲ್ 13(ನಾಲ್ಕು ವಾರ) ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ ಇಂದು 34ಕ್ಕೆ ಏರಿಕೆಯಾಗಿದೆ.

ಕಳೆದ ಭಾನುವಾರದಿಂದ ಆರಂಭವಾದ ಹಿಂಸಾಚಾರದಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಇಬ್ಬರು ಗುರುವಾರ ಮೃತರಾಗಿದ್ದು, ದೆಹಲಿಯ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಓರ್ವ ಗಾಯಾಳು ಮತೃಪಟ್ಟಿದ್ದಾರೆ. ಆ ಮೂಲಕ ದೆಹಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ಇದೀಗ 34ಕ್ಕೇರಿಕೆಯಾಗಿದೆ.

SCROLL FOR NEXT