ದೇಶ

ಪುಲ್ವಾಮ ದಾಳಿ ಪ್ರಕರಣದ ಆರೋಪಿಗೆ ಜಾಮೀನು ಸಿಕ್ಕಿಲ್ಲ, ಮಾಧ್ಯಮಗಳ ಸುದ್ದಿ ಸುಳ್ಳು: ಎನ್ಐಎ

Srinivasamurthy VN

ನವದೆಹಲಿ: 40 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿದ್ದ ಪುಲ್ವಾಮ ಉಗ್ರ ದಾಳಿ ಪ್ರಕರಣದ ಆರೋಪಿಗೆ ಜಾಮೀನು ಸಿಕ್ಕಿದೆ ಎಂಬ ಮಾಧ್ಯಮಗಳ ವರದಿ ಸುಳ್ಳು ಎಂದು ರಾಷ್ಟ್ಪೀಯ ತನಿಖಾ ದಳ ಸ್ಪಷ್ಟಪಡಿಸಿದೆ.

ಈ ಹಿಂದೆ ಪುಲ್ವಾಮಾ ದಾಳಿ ಪ್ರಕರಣದ ಆರೋಪಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿಗದಿತ ಅವಧಿಯೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾದ ಕಾರಣ ದೆಹಲಿಯ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ ಎಂದು ಕೆಲ ಸುದ್ದಿಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಗಳನ್ನು ಅಲ್ಲಗಳೆದಿರುವ ಎನ್ಐಎ, ಪ್ರಸ್ತುತ ಜಾಮೀನು ಸಿಕ್ಕಿರುವುದು ಪುಲ್ವಾಮ ದಾಳಿ ಪ್ರಕರಣದ ಆರೋಪಿಗಲ್ಲ. ಬದಲಿಗೆ 2019 ಫೆಬ್ರವರಿಯಲ್ಲಿ ಬಂಧಿಸಲಾಗಿದ್ದ ಭಯೋತ್ಪಾದನೆ ಸಂಚು ಪ್ರಕರಣದ ಆರೋಪಿ ಯೂಸುಫ್ ಚೋಪನ್ ಗೆ ಎಂದು ಹೇಳಿದೆ.

ಚೋಪನ್ ಜೈಶ್ ಇ ಮೊಹಮದ್ ಸಂಘಟನೆಗೆ ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಆತನನ್ನು ಮತ್ತು ಆತನ ಇತರೆ 6 ಮಂದಿ ಸಹಚರರನ್ನು 2019ರಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಬಂಧಿತರನ್ನು ಸಜಾದ್ ಅಹ್ಮದ್ ಖಾನ್, ತನ್ವೀರ್ ಅಹ್ಮದ್ ಗನಿ, ಬಿಲಾಲ್ ಅಹ್ಮದ್ ಮಿರ್, ಮುಜಾಫರ್ ಅಹ್ಮದ್ ಭಟ್, ಇಶ್ಫಾಕ್ ಅಹ್ಮದ್ ಭಟ್ ಮತ್ತು ಮೆಹರಾಜ್-ಉದ್-ದಿನ್ ಚೋಪನ್ ಎಂದು ಗುರುತಿಸಲಾಗಿತ್ತು. ಅಲ್ಲದೆ ಮುಜಾಸೀರ್ ಅಹ್ಮದ್ ಖಾನ್ ಮತ್ತು ಕರಿ ಮುಫ್ತಿ ಯಾಸೀರ್ ಅವರು ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಸಾವನ್ನಪ್ಪಿದ್ದರು ಎಂದು ಎನ್ಐಎ ಹೇಳಿದೆ.

ಇನ್ನು ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಅತ್ತ ಕಾಂಗ್ರೆಸ್ ಪಕ್ಷ ಎನ್ಐಎ ಅಧಿಕಾರಿಗಳ ವಿರುದ್ಧ ಕಿಡಿಕಾರಿತ್ತು. ಇದು ನಿಜಕ್ಕೂ ಅವಮಾನಕರವಾದ ಸಂಗತಿ ಎಂದು ಟೀಕಿಸಿತ್ತು. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿತ್ತು.

ಫೆಬ್ರವರಿ 14, 2019 ರಂದು ಪುಲ್ವಾಮಾ ಜಿಲ್ಲೆಯ ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಬೆಂಗಾವಲು ವಾಹನದ ಮೇಲೆ ಆತ್ಮಾಹುತಿ ಬಾಂಬರ್ ತನ್ನ ಸ್ಫೋಟಕಗಳನ್ನು ತುಂಬಿದ ಕಾರನ್ನು ಸಿಆರ್‌ಪಿಎಫ್ ಬಸ್‌ಗೆ ನುಗ್ಗಿಸಿದ ಪರಿಣಾಮ 40 ಮಂದಿ ಸಿಬ್ಬಂದಿ ಹತಾತ್ಮರಾಗಿದ್ದರು. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ದಾಳಿಕೋರನ ವೀಡಿಯೊವನ್ನು ಬಿಡುಗಡೆ ಮಾಡಿ, ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು.

SCROLL FOR NEXT