ದೇಶ

ದೆಹಲಿ ಹಿಂಸಾಚಾರದ ವೇಳೆ ಸಾರ್ವಜನಿಕ ಆಸ್ತಿ ನಷ್ಟ; ಗಲಭೆಕೋರರಿಂದಲೇ ವಸೂಲಿ!

Srinivasamurthy VN

ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಮಾದರಿಯಂತೆಯೇ ಇದೀಗ ದೆಹಲಿಯಲ್ಲೂ ಗಲಭೆಕೋರರಿಂದಲೇ ನಷ್ಟ ವಸೂಲಿ ಮಾಡಲು ದೆಹಲಿ ಪೊಲೀಸರು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಹೌದು.. ದೆಹಲಿಯಲ್ಲಿ ನಡೆದ ಸಿಎಎ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದಲ್ಲಿ ಸಂಭವಿಸಿದ ಅಪಾರ ಪ್ರಮಾಣದ ನಷ್ಟವನ್ನು ಗಲಭೆಕೋರರಿಂದಲೇ ಭರಿಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಗಲಭೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಮಾತ್ರವಲ್ಲದೇ ಅವರಿಂದ ದಂಡ ವಸೂಲಿಗೂ ದೆಹಲಿ ಪೊಲೀಸ್ ಇಲಾಖೆ ಚಿಂತನೆಯಲ್ಲಿ ತೊಡಗಿದೆ. ಒಂದು ವೇಳೆ ದಂಡ ಪಾವತಿ ಮಾಡದಿದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲೂ ಸಹ ಚಿಂತಿಸಲಾಗುತ್ತಿದೆ.

ಈ ಸಂಬಂಧ ದೆಹಲಿ ಕ್ರೈಮ್ ಬ್ರಾಂಚ್ ಗೆ ಈಗಗಾಲೇ ದೆಹಲಿ ಪೊಲೀಸ್ ಆಯುಕ್ತರ ಕಚೇರಿಯಿಂದ ನಿರ್ದೇಶನ ತೆರಳಿದೆ ಎಂದು ಹೇಳಲಾಗುತ್ತಿದ್ದು, ಕ್ರೈಮ್ ಬ್ರಾಂಚ್ ನ ವಿಶೇಷ ತನಿಖಾದಳದ ಸಿಬ್ಬಂದಿ ಈ ಕುರಿತು ತನಿಖೆ ನಡೆಸಿ ಗಲಭೆ ಕೋರರ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಪೊಲೀಸ್ ಇಲಾಖೆ ಈವರೆಗೂ ಸುಮಾರು 1 ಸಾವಿರಕ್ಕೂ ಅಧಿಕ ಗಲಭೆಕೋರರನ್ನು ಗುರುತಿಸಿ ಪಟ್ಟಿ ಸಿದ್ಧ ಮಾಡಿದೆ. ಈ ಪೈಕಿ 630 ಮಂದಿಯನ್ನು ವಶಕ್ಕೆ ಪಡೆದಿದೆ.

ಅಂತೆಯೇ ಈ ಸಂಬಂಧ ದೆಹಲಿ ನಾಗರಿಕ ಅಧಿಕಾರಿಗಳು ಮತ್ತು ದೆಹಲಿ ಸರ್ಕಾರದೊಂದಿಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. 

SCROLL FOR NEXT