ದೇಶ

ದೆಹಲಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಓರ್ವ ಅಗ್ನಿಶಾಮಕ ಸಿಬ್ಬಂದಿ ಸಾವು, 14 ಮಂದಿಗೆ ಗಾಯ

Lingaraj Badiger

ನವದೆಹಲಿ: ದೆಹಲಿಯ ಪೀರ್ ಗರ್ಹಿ ಬ್ಯಾಟರಿ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದಾರೆ.

ಪೀರ್ ಗರ್ಹಿ ಉದ್ಯೋಗ್ ನಗರದಲ್ಲಿನ ಬ್ಯಾಟರಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಜಾನೆ 4 ಗಂಟೆ ಸುಮಾರಿಗೆ ಕರೆ ಸ್ವೀಕರಿಸಿದ ನಂತರ 35 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಶ್ರಮಿಸಿದ್ದಾರೆ. 

ಘಟನೆಯಲ್ಲಿ 14 ಜನರು ಗಾಯಗೊಂಡಿದ್ದು, ಓರ್ವ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

ಸ್ಥಳದಲ್ಲಿ ಹಾಜರಿದ್ದ ದೆಹಲಿ ಅಗ್ನಿಶಾಮಕ ಸೇವೆ ನಿರ್ದೇಶಕ ಅತುಲ್ ಗಾರ್ಗ್, ಕಟ್ಟಡದೊಳಗೆ ಬೆಂಕಿ ಆರಿಸಿ ಜನರನ್ನು ಕಾಪಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದ ಐವರು ಅಗ್ನಿಶಾಮಕ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಕಟ್ಟಡದಲ್ಲಿದ್ದ 18 ಮಂದಿಯನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸಲು ಹೋದಾಗ ಕಟ್ಟಡದಲ್ಲಿ ಹಠಾತ್ತಾಗಿ ಸ್ಫೋಟವುಂಟಾಗಿ ಅಗ್ನಿಶಾಮಕ ಸಿಬ್ಬಂದಿ ಸಿಕ್ಕಿಹಾಕಿಕೊಂಡಿದ್ದರು.

ಪೀರ್‍ ಗರ್ಹಿ ಅಗ್ನಿ ದುರಂತದಲ್ಲಿ ಮೃತಪಟ್ಟ ಅಗ್ನಿಶಾಮಕ ಸಿಬ್ಬಂದಿ ಅಮಿತ್ ಬಲ್ಯನ್(20) ಎಂದು ಗುರುತಿಸಲಾಗಿದ್ದು, ಅಗ್ನಿ ಅವಘಡದಲ್ಲಿ ಸಿಬ್ಬಂದಿ ಪ್ರಾಣ ಕಳೆದುಕೊಂಡ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀವ್ರ ಸಂತಾಪ ಸೂಚಿಸಿದ್ದಾರೆ.

SCROLL FOR NEXT