ದೇಶ

ರಾಜಕೀಯ ಸ್ವಹಿತಾಸಕ್ತಿ ಸಾಧನೆಗಾಗಿ ವಿದ್ಯಾರ್ಥಿಗಳ ಬಳಕೆ ಅಕ್ಷಮ್ಯ: ಕಾಂಗ್ರೆಸ್ ವಿರುದ್ಧ ಸ್ಮೃತಿ ಇರಾನಿ ಟೀಕೆ

Srinivasamurthy VN

ನವದೆಹಲಿ: ರಾಜಕೀಯ ಸ್ವಹಿತಾಸಕ್ತಿ ಸಾಧನೆಗಾಗಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ.

ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಕ್ಯಾಂಪಸ್‌ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಗೆ ಸಂಭಂದಿಸಿದಂತೆ ಭುಗಿಲೆದ್ದಿರುವ ವಿವಾದ ಸಂಬಂಧ ಮಾತನಾಡಿದ ಇರಾನಿ, ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಪ್ರತಿಪಕ್ಷಗಳು ಈಗಾಗಲೇ ಅಪರಾಧಿಗಳು ಎಂಬಂತೆ ಬಿಂಬಿಸುತ್ತಿವೆ. ಅದು ಸರಿಯಲ್ಲ. ಆದರೆ ವಿಶ್ವವಿದ್ಯಾಲಯಗಳು ರಾಜಕೀಯ ಪಕ್ಷಗಳ ಕೇಂದ್ರಗಳಾಗಬಾರದು. ಅಂತೆಯೇ ವಿದ್ಯಾರ್ಥಿಗಳನ್ನು ತಮ್ಮ ರಾಜಕೀಯ ಸ್ವಹಿತಾಸಕ್ತಿ ಸಾಧನೆಯ ಅಸ್ತ್ರಗಳಾಗಿ ಬಳಸಿಕೊಳ್ಳಬಾರದು ಎಂದು ಹೇಳಿದರು.

ಇನ್ನು ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಕ್ಯಾಂಪಸ್‌ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿತ್ತು. ಸಂಜೆ ಕೆಲವು ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಪ್ರವೇಶಿಸಿ ಕಲ್ಲು, ಕಬ್ಬಿಣದ ರಾಡ್‌ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಸಂಬಂಧದ ವೀಡಿಯೋ ವೈರಲ್ ಆಗಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಐಶೆ ಘೋಷ್, ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಯಾದವ್ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿದೆ. ತಕ್ಷಣ ಅವರನ್ನು ಏಮ್ಸ್‌ ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ತಿಳಿಸಿದೆ.

SCROLL FOR NEXT