ದೇಶ

ಜೆಎನ್ ಯು ಹಿಂಸಾಚಾರ: ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತ ರಘುರಾಮ್ ರಾಜನ್

Lingaraj Badiger

ನವದೆಹಲಿ: ದೆಹಲಿಯ ಪ್ರತಿಷ್ಠಿತ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಕಳೆದ ಭಾನುವಾರ ನಡೆದ ಗೂಂಡಾ ದಾಳಿ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬೆಂಬಲ ಸೂಚಿಸಿದ್ದಾರೆ.

ಕಳೆದ ಬುಧವಾರ ಜೆಎನ್ ಯು ಕ್ಯಾಂಪಸ್ ಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಮೌನವಾಗಿಯೇ ಪ್ರತಿಭಟಿಸಿದ್ದ ದೀಪಿಕಾ ಅವರ ಬೆಂಬಲಕ್ಕೆ ನಿಂತಿರುವ ರಘುರಾಮ್ ರಾಜನ್ ಅವರು, ಹಾಡುಹಡಗಲಿನಲ್ಲೇ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಕ್ಕೆ ಮುಸುಕುಧಾರಿಗಳು ನುಗ್ಗಿ ಹಿಂಸಾಚಾರ ನಡೆಸುತ್ತಾರೆ. ವಿವಿಯ ಸ್ವಂತುಗಳನ್ನು ಒಡೆದು ಹಾಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಾರೆ ಎಂದರೆ ಇದಕ್ಕಿಂತ ಆತಂಕಕಾರಿ ಬೆಳವಣಿಗೆ ಮತ್ತೊಂದಿಲ್ಲ ಎಂದು ಲಿಂಕ್ ಡಿನ್ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

ವಿಶ್ವವಿದ್ಯಾಲಯಕ್ಕೆ ನುಗ್ಗಿ ಹಲ್ಲೆ ನಡೆಸಿದವರ ಕೈಗೆ ಸಿಕ್ಕು ಸಾಕಷ್ಟು ಮಂದಿ ಗಾಯಗೊಂಡಿದ್ದರು. ಇಂಥ ಗಾಯಾಳುಗಳ ಆರೋಗ್ಯ ವಿಚಾರಿಸಲು ತೆರಳುವುದೇ ತಪ್ಪು ಎನ್ನುವಂತೆ ಬಿಂಬಿಸಲಾಗುತ್ತಿದೆ. ಅವರು ನಟಿಸಿರುವ ಚಪ್ಪಾಕ್ ಸಿನಿಮಾ ಇದೀಗ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮಾನವೀಯ ದೃಷ್ಟಿಯಿಂದ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಅವರಿಗೆ ಕಷ್ಟ ಬಂದಿದ್ದು, ಎಲ್ಲರೂ ಇದೀಗ ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ರಘುರಾಮ್ ರಾಜನ್ ಕರೆ ನೀಡಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಗಳ ಜನರು ಒಗ್ಗಟ್ಟಾಗಿದ್ದಾರೆ. ವೈವಿಧ್ಯಮಯ ನಂಬಿಕೆಗಳು ಇದೀಗ ಒಟ್ಟಾಗಿ ಸಾಗುತ್ತಿವೆ. ಕೇಂದ್ರ ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ನಡೆಯುತ್ತಿರುವ ಹೋರಾಟವೇ ಇದಕ್ಕೆ ಸಾಕ್ಷಿಯಾಗಿದೆ. ಜೆಎನ್ ಯು ಹೋರಾಟದಲ್ಲಿ ಪಾಲ್ಗೊಂಡಿದ್ದನ್ನು ಕಂಡಾಗ ಭಾರತದಲ್ಲಿ ಸಂವಿಧಾನವು ಮತ್ತಷ್ಟು ಪ್ರಕಾಶಿಸುತ್ತಿದೆ ಎಂದೆನಿಸುತ್ತದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
 

SCROLL FOR NEXT